ಶಾಲಾ ಮಕ್ಕಳಿಂದ ಅಕ್ಷರ ರಚನೆ ಮಾಡುವ ವಿಭಿನ್ನ ಪ್ರಚಾರಕ್ಕೆ ಚಾಲನೆ
83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಮೈಸೂರು, ನ.20: 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಶಾಲಾ ಮಕ್ಕಳಿಂದ ಅಕ್ಷರ ರಚನೆ ಮಾಡುವ ಮೂಲಕ ವಿಭಿನ್ನ ಪ್ರಚಾರಕ್ಕೆ ಸೋಮವಾರ ಅರಮನೆ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ಇದೇ ತಿಂಗಳ 24 ರಿಂದ ಮೂರು ದಿನಗಳ ಕಾಲ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಡೆಯಲಿದೆ. ಅದಕ್ಕೆ ಪ್ರಚಾರ ನೀಡುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಅರಮನೆ ಮುಂಭಾಗದಲ್ಲಿ 20 ಶಾಲೆಗಳ 2 ಸಾವಿರ ಮಕ್ಕಳು ಕುವೆಂಪು ಶ್ರೀ ರಾಮಾಯಣ ದರ್ಶನಂ ಕಾವ್ಯಕ್ಕೆ 50 ವರ್ಷ ತುಂಬಿದ ಹಿನ್ನೆಲ್ಲೆಯಲ್ಲಿ ಅದರ ಅಕ್ಷರ ಸಂರಚನೆ ಮಾಡಿ ಕನ್ನಡ ಭಾವುಟ ಹಿಡಿದು ಪ್ರಚಾರಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, 27 ವರ್ಷಗಳ ಬಳಿಕ ಮೈಸೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇದರ ಪ್ರಚಾರಕ್ಕಾಗಿ 20 ಶಾಲೆಗಳಿಂದ 2 ಸಾವಿರ ಮಕ್ಕಳು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯದ ಅಕ್ಷರ ರಚನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಮಾಡಲಾಗುತ್ತಿದ್ದು, ಇದರಿಂದ ಅರಮನೆಗೆ ಆಗಮಿಸುವ ಪ್ರವಾಸಿಗರೂ ಕೂಡ ಹಳದಿ ಕೆಂಪುಬಣ್ಣದ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ವಿನ್ಯಾಸದ ಸೌಂದರ್ಯವನ್ನು ಸವಿಯಲಿದ್ದಾರೆ ಎಂದರು.







