ನಾಯಿಗಳಿಗೆ ಕಾಲರ್ ಐಡಿ ಅಳವಡಿಸಿ: ಸಂಪತ್ ರಾಜ್
ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು, ನ.21: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಕಾರಣ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿರುವ ಬೀದಿ ನಾಯಿಗಳಿಗೆ ಕಡ್ಡಾಯವಾಗಿ ಕಾಲರ್ ಐಡಿ ಅಳವಡಿಸಬೇಕೆಂದು ಬಿಬಿಎಂಪಿ ಮೇಯರ್ ಸಂತ್‌ರಾಜ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರಾಜರಾಜೇಶ್ವರಿನಗರ ವಲಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಮೇಯರ್ ಅಧಿಕಾರಿಗಳಿಗೆ ಪ್ರಶ್ನಿಸಿದರು.
ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಶಸ್ತ್ರ ಚಿಕಿತ್ಸೆ ಮಾಡಿದ್ದರೂ ಅದು ಹೇಗೆ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಲ್ಲದೆ, ಯಾವ ನಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿದೆ ಎಂಬುದು ಗೊತ್ತಾಗುವುದಿಲ್ಲ. ಅದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಿದ ನಾಯಿಗಳಿಗೆ ಮೊದಲು ಕಾಲರ್ ಐಡಿ ಅಳವಡಿಸಿ. ಆಗ ಶಸ್ತ್ರ ಚಿಕಿತ್ಸೆ ಒಳಗಾಗದ ನಾಯಿಗಳ ಸಂಖ್ಯೆ ನಿಖರವಾಗಿ ಗೊತ್ತಾಗುತ್ತದೆ ಎಂದು ಮೇಯರ್ ಸಂಪತ್‌ರಾಜ್ ಸೂಚಿಸಿದರು.
ರಾಜರಾಜೇಶ್ವರಿನಗರ ವಲಯದಲ್ಲಿ ಒಟ್ಟು 22 ಕೆರೆಗಳಿದ್ದು, ಪ್ರತಿಕೆರೆಗಳ ವಿಸ್ತೀರ್ಣ ಅವುಗಳ ವಿಶೇಷತೆ ಖರ್ಚು ಮಾಡಿದ ಅನುದಾನ ಮತ್ತಿತರ ಮಾಹಿತಿಗಳು ನಾಮಫಲಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಕೆರೆಗಳಿಗೆ ವಲಸೆ ಬಂದ ಹಕ್ಕಿಗಳು ಆಗಮಿಸುವ ಹಿನ್ನೆಲೆಯಲ್ಲಿ ಹಕ್ಕಿಗಳ ಪೋಷಣೆ ಮಾಡಬೇಕು. ಸಾರ್ವಜನಿಕರು ಕೆರೆಯ ಸುತ್ತಮುತ್ತ ವಾಯುವಿಹಾರ ಮಾಡಲು ಉತ್ತಮ ಪರಿಸರವನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ತೆರಿಗೆ ವಸೂಲಿ ಮಾಡುವಲ್ಲಿ ರಾಜರಾಜೇಶ್ವರಿನಗರದ ಕಂದಾಯ ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಹಾಗಾಗಿ, ರಾಜರಾಜೇಶ್ವರಿನಗರ ವಲಯದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡುವಲ್ಲಿ ಗಮನ ಹರಿಸಬೇಕು. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಸಹಾಯಕವಾಗಲಿದೆ. ಅಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಸೇರಿ ಪ್ರಮುಖರಿದ್ದರು.







