ಪ್ರತಿ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವಷ್ಟು ತಾಕತ್ತಿದೆ: ಬಿಜೆಪಿ ನಾಯಕನಿಂದ ಮತ್ತೊಂದು ಬೆದರಿಕೆ
ಪದ್ಮಾವತಿ ವಿವಾದ

ಹೊಸದಿಲ್ಲಿ : ವಿವಾದಿತ `ಪದ್ಮಾವತಿ' ಚಲನಚಿತ್ರದ ನಾಯಕನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರನ್ನು ಹತ್ಯೆಗೈದವರಿಗೆ ರೂ 10 ಕೋಟಿ ನೀಡುವುದಾಗಿ ಈ ಹಿಂದೆ ಘೋಷಿಸಿದ್ದ ಹಿರಿಯ ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಇದೀಗ ಹೊಸ ಬೆದರಿಕೆಯೊಂದನ್ನು ಹಾಕಿದ್ದಾರೆ.
``ಈ ದೇಶದ ಯುವಜನತೆ ಹಾಗೂ ಕ್ಷತ್ರಿಯ ಜಾತಿಯು ದೇಶದ ಪ್ರತಿಯೊಂದು ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವಷ್ಟು ತಾಕತ್ತು ಹೊಂದಿದೆ'' ಎಂದು ಹೇಳಿರುವ ಅವರು ಈ ಒಂದು ಕ್ರಮವು ಪ್ರಧಾನಿಯ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದಂತೆಯೇ ಪಸರಿಸುವುದು ಎಂದು ಕೂಡ ತಿಳಿಸಿದ್ದಾರೆ.
ಡಿಸೆಂಬರ್ 1ರಂದು `ಪದ್ಮಾವತಿ' ಬಿಡುಗಡೆಗೊಳ್ಳಬೇಕಿದ್ದರೂ ಈಗ ಎದ್ದಿರುವ ಭಾರೀ ವಿವಾದ ಹಾಗೂ ಚಿತ್ರದ ಪ್ರಮುಖ ನಟರು ಹಾಗೂ ನಿರ್ದೇಶಕರಿಗೆ ಬಂದಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಬಿಡುಗಡೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ. ರಾಜಸ್ಥಾನದ ರಜಪೂತ ಕರ್ನಿ ಸೇನೆಯು ಚಿತ್ರ ಬಿಡುಗಡೆಗೊಂಡರೆ ಶೂರ್ಪನಖಿಯಂತೆ ದೀಪಿಕಾಳ ಮೂಗು ಕೊಯ್ಯುವುದಾಗಿ ಈಗಾಗಲೇ ಬೆದರಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರಕ್ಕೆ ಪತ್ರ ಬರೆದು ಪದ್ಮಾವತಿಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರಲ್ಲದೆ ಚಿತ್ರದ ನಿರ್ದೇಶಕ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿರುವುದರಿಂದ ಎಲ್ಲಾ ಸಮಸ್ಯೆಗೂ ಅವರನ್ನೇ ಹೊಣೆಯಾಗಿಸಬೇಕೆಂದು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ಚಿತ್ರವನ್ನು ವಿರೋಧಿಸುವವರನ್ನು ಸಮರ್ಥಿಸಿದ್ದು, ಅವಮಾನಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಚಿತ್ರ ಬಿಡುಗಡೆಯ ಮುನ್ನ ಅದನ್ನು ವೀಕ್ಷಿಸಲು ಕರ್ನಿ ಸೇನಾ ಮತ್ತು ಇತರ ಪ್ರತಿಭಟನಾ ಗುಂಪುಗಳಿಗೆ ಚಿತ್ರ ತಂಡ ಅನುಮತಿಸಬೇಕೆಂದು ಹಲವು ಕೇಂದ್ರ ಸಚಿವರುಗಳು ಕೂಡ ಹೇಳಿದ್ದಾರೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇನ್ನಷ್ಟೇ ಪ್ರಮಾಣಪತ್ರ ನೀಡಬೇಕಿದೆ. ಅತ್ತ ಚಿತ್ರ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಎರಡು ಅಪೀಲುಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.







