ವಿದ್ಯುತ್ ಕಡಿತ ಸಮಸ್ಯೆ ಪರಿಹರಿಸಲು ಮಾರ್ಗಸೂಚಿ ರಚಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ನ.21: ವಿದ್ಯುತ್ ಬಿಲ್ ಬಾಕಿ ಎಂಬ ಸಣ್ಣಪುಟ್ಟ ಕಾರಣಗಳಿಗೆ ವಾಸದ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ನಿರ್ಬಂಧಿಸುವುದು ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಅನ್ವಯವಾಗುವಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರಚಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಮೆಸ್ ಕಾಂ ಕ್ರಮ ಪ್ರಶ್ನಿಸಿ ಬೈಂದೂರು ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯೊಂದನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕ ಸದಸ್ಯ ಪೀಠ ಈ ನಿರ್ದೇಶನ ನೀಡಿತು.
ಪ್ರತಿಯೊಬ್ಬರು ವಿದ್ಯುತ್ ಸಂಪರ್ಕ ಪಡೆಯುವುದು ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರಲಿದೆ. ಆದರೆ, ವಿದ್ಯುತ್ ಬಿಲ್ ಬಾಕಿ, ಮೀಟರ್ ಅಳವಡಿಸಿಲ್ಲ ಎಂಬಂತಹ ಸಣ್ಣಪುಟ್ಟ ವಿಚಾರಗಳಿಗೆ ಸಕ್ಷಮ ಪ್ರಾಧಿಕಾರಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸವುದು ಸರಿಯಲ್ಲ. ಇಂತಹ ಪ್ರಕರಣಗಳೂ ನ್ಯಾಯಾಲಯಕ್ಕೆ ಹೆಚ್ಚು ಬರುತ್ತಿವೆ. ಹೀಗಾಗಿ, ನ್ಯಾಯಾಲಯದ ಆದೇಶಗಳನ್ನು ಹೊರತುಪಡಿಸಿ ಇತರೆ ಕಾರಣಗಳಿಗಾಗಿಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಇರುವ ಸಂಬಂಧ ಸಕ್ಷಮ ಪ್ರಾಧಿಕಾರಗಳಿಗೆ (ಎಸ್‌ಕಾಂ, ಬೆಸ್ ಕಾಂ, ಜೆಸ್‌ಕಾಂ, ಕೆಪಿಟಿಸಿಎಲ್ ಇತರೆ ) ಅನ್ವಯವಾಗುವಂತೆ ನಿರ್ದಿಷ್ಟ ಮಾರ್ಗ ಸೂಚಿಗಳನ್ನು ರಚಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿತು.







