ಶ್ರೀಲಂಕಾ ಪ್ರಧಾನಿ ದಂಪತಿ ಕೊಲ್ಲೂರಿಗೆ: ವಿಶೇಷ ಪೂಜೆ, ಚಂಡಿಕಾಯಾಗ

ಕೊಲ್ಲೂರು, ನ.21: ಶ್ರೀಲಂಕಾದ ಪ್ರಧಾನಿ ರನಿಲಾ ವಿಕ್ರಮ ಶಿಂಘೆ ಹಾಗೂ ಅವರ ಪತ್ನಿ ಡಾ.ಮೈತ್ರಿ ವಿಕ್ರಮ ಶಿಂಘೆ ಅವರು ಇಂದು ಬೆಳಗ್ಗೆ ಕೊಲ್ಲೂರಿಗೆ ಆಗಮಿಸಿ ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಶತ ಚಂಡಿಕಾಯಾಗದಲ್ಲಿ ಭಾಗವಹಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಇಂದು ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ವಿಕ್ರಮ ಶಿಂಘೆ ದಂಪತಿ, ಬೆಳಗ್ಗೆ 10:30ಕ್ಕೆವಿಶೇಷ ಹೆಲಿಕಾಫ್ಟರ್‌ನಲ್ಲಿ ಅರೆಶಿರೂರು ಹೆಲಿಪ್ಯಾಡ್‌ಗೆ ಬಂದಿಳಿದರು. ಅಲ್ಲಿಂದ ನೇರವಾಗಿ ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿದ ಅವರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ರಲ್ಲದೇ, ಶತ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಪೂರ್ಣಾಹುತಿ ನೀಡಿದರು.
ಬಳಿಕ ದೇವಸ್ಥಾನದ ಒಳಸುತ್ತಿನಲ್ಲಿ ನಡೆದ ರಥೋತ್ಸವದಲ್ಲಿ ಸ್ವಲ್ಪದೂರ ರಥವನ್ನು ಎಳೆದ ರನಿಲಾ ವಿಕ್ರಮಶಿಂಘೆ, ದೇವರ ಪ್ರಸಾದ ಸ್ವೀಕರಿಸಿ 1:30ರ ಸುಮಾರಿಗೆ ಕೊಲ್ಲೂರು ಅರೆಶಿರೂರಿನಿಂದ ಹೆಲಿಕಾಫ್ಟರ್ ಮೂಲಕ ಮಂಗಳೂರಿಗೆ ನಿರ್ಗಮಿಸಿದರು.
ಶ್ರೀಲಂಕಾ ಪ್ರಧಾನಿ ಅವರು ಕಳೆದ ಆಗಸ್ಟ್ ತಿಂಗಳಲ್ಲೇ ಕೊಲ್ಲೂರಿಗೆ ಭೇಟಿ ನೀಡಬೇಕಿತ್ತು. ಹವಾಮಾನ ವೈಫರಿತ್ಯದ ಕಾರಣ ಆ.26 ಹಾಗೂ 27ರಂದು ಅವರು ಬೆಂಗಳೂರಿ ನಿಂದ ಬರಬೇಕಿದ್ದ ಹೆಲಿಕಾಫ್ಟರ್ ಉಡ್ಡಯನ ಮಾಡಲು ಸಾಧ್ಯವಾಗದೇ ಭೇಟಿಯನ್ನು ರದ್ದುಪಡಿಸಲಾಗಿತ್ತು. ಇದೀಗ ಖಾಸಗಿ ಭೇಟಿಯಲ್ಲಿ ಕೊಲ್ಲೂರಿಗೆ ಆಗಮಿಸಿದ ಅವರು, ಎರಡು ದಿನಗಳ ಭಾರತದ ಅಧಿಕೃತ ಭೇಟಿಯಲ್ಲಿ ಹೊಸದಿಲ್ಲಿಯಲ್ಲಿ ಪ್ರಧಾನಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿಯಾಗುವ ಕಾರ್ಯಕ್ರಮವಿದೆ.
‘ಶ್ರೀಲಂಕಾ ಪ್ರಧಾನಿಯವರ ಪರವಾಗಿ ಕಳೆದ ನ.19ರಿಂದ ಕೊಲ್ಲೂರಿನಲ್ಲಿ ವಿಶೇಷ ಹೋಮ ಹವನ, ಪೂಜೆಗಳು ನಡೆಯುತ್ತಿವೆ. ಮೊದಲ ದಿನ ಮಹಾ ಗಣಪತಿ ಹೋಮ, ಎರಡನೇ ದಿನ ಗಾಯತ್ರಿ ಹೋಮ, ಮೂರನೇ ದಿನ ಶತ ಚಂಡಿಕಾ ಹೋಮ ಮಾಡಲಾಗಿದೆ. ಅವರ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಲೋಕ ಕಲ್ಯಾಣಾರ್ಥ ಈ ಹೋಮಗಳನ್ನು ಮಾಡಲಾಗಿದೆ. ಮೂರು ದಿನಗಳ ಶತ ಚಂಡಿಕಾ ಹೋಮ ಇಂದು ಅಪರಾಹ್ನ ಮುಕ್ತಾಯಗೊಂಡಿದೆ.’ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ.ಕೆ.ಎನ್.ನರಸಿಂಹ ಅಡಿಗ ಸುದ್ದಿಗಾರ ರಿಗೆ ತಿಳಿಸಿದರು.
ಇಂದು ಯಾಗದಲ್ಲಿ ಪೂರ್ಣಾಹುತಿ ನೀಡುವ ಮೂಲಕ ರಥೋತ್ಸವದಲ್ಲೂ ಪಾಲ್ಗೊಂಡು ಅವರು ನಿರ್ಗಮಿಸಿದ್ದಾರೆ ಎಂದ ಅಡಿಗ, ಪ್ರಧಾನಿಯವರೊಂದಿಗೆ ಪತ್ನಿ, ಅವರ ಸ್ನೇಹಿತರಾದ ಸದಾಶಿವ, ಅಶ್ವಿನಿ ಕರಬಯ್ಯ ಅವರು ಆಗಮಿಸಿದ್ದರು. ಕರಬಯ್ಯ ಕಳೆದ ನ.19ರಿಂದ ಇಲ್ಲಿದ್ದು ಎಲ್ಲಾ ಕಾರ್ಯಕ್ರಮಗಳ ಮೇಲ್ವಿಚಾರಣೆ ನೋಡಿಕೊಂಡಿದ್ದಾರೆ. ಹವನದಲ್ಲಿ 31 ಮಂದಿ ಋತ್ವಿಜರು ಭಾಗವಹಿಸಿದ್ದು ಪ್ರಧಾನವಾಗಿ ತಾನು ಹಾಗೂ ಬಿ.ಎನ್. ಮಂಜುನಾಥ ಅಡಿಗ ಇದರ ನೇತೃತ್ವ ವಹಿಸಿದ್ದೆವು ಎಂದವರು ಹೇಳಿದರು.
ಸುಮಾರು ನಾಲ್ಕು ತಿಂಗಳ ಹಿಂದೆ ಅವರು ನನ್ನನ್ನು ಸಂಪರ್ಕಿಸಿ ಕೊಲ್ಲೂರಿಗೆ ಭೇಟಿ ನೀಡುವ ಹಾಗೂ ಇಲ್ಲಿ ಶತಚಂಡಿಕಾ ಹೋಮ ನಡೆಸುವ ಸಂಕಲ್ಪ ವ್ಯಕ್ತಪಡಿಸಿದ್ದರು. ಆಗಸ್ಟ್‌ನಲ್ಲಿ ಆಗಮಿಸುವ ಅವರ ಪ್ರಯತ್ನ ಹವಾಮಾನದ ಕಾರಣ ಕೈಗೂಡಿರಲಿಲ್ಲ. ಇದೀಗ ಅವರ ಅಪೇಕ್ಷೆ ಪೂರ್ಣಗೊಂಡಿದೆ ಎಂದು ನರಸಿಂಹ ಅಡಿಗ ನುಡಿದರು.
ಲಂಕಾದ ಪ್ರಧಾನಿ ದೇವಸ್ಥಾನಕ್ಕೆ ಆಗಮಿಸಿದಾಗ ದೇವಸ್ಥಾನದ ಆಡಳಿತ ಮಂಡಳಿ ಅದ್ಯಕ್ಷ ಹರೀಶ್‌ಕುಮಾರ್ ಎಂ.ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಜನಾರ್ದನ, ಕೃಷ್ಣಮೂರ್ತಿ, ಮಂಡಳಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ, ಜಯಂತಿ, ಅಂಬಿಕಾ ರಾಜು ದೇವಾಡಿಗ, ಕೊಲ್ಲೂರು ರಮೇಶ್ ಗಾಣಿಗ, ಡಾ.ಅಭಿಲಾಷ್ ಪಿಳ್ಳೈ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಡಾ.ಸಂಜೀವ ಪಾಟೀಲ್ ಅವರು ಜೊತೆಗಿದ್ದರು. ವಿಕ್ರಮ ಶಿಂಘೆ ಭೇಟಿ ಹಿನ್ನೆಲೆಯಲ್ಲಿ ಅರೆಶಿರೂರಿನಿಂದ ಕೊಲ್ಲೂರಿನವರೆಗೆ ಮಾರ್ಗದಲ್ಲಿ ಹಾಗೂ ದೇವಸ್ಥಾನದ ಆಸುಪಾಸಿನಲ್ಲಿ ಬಿಗು ಬಂದೊಬಸ್ತ್ ಎರ್ಪಡಿಸಲಾಗಿತ್ತು. ಬೆಳಗ್ಗೆ 11ರಿಂದ ಅಪರಾಹ್ನ 1:30ರವರೆಗೆ ಭಕ್ತರಿಗೆ ದೇವಳದ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕೊಲ್ಲೂರು ಪೇಟೆಯಲ್ಲಿ ಹೊಟೇಲು, ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಬಸ್ ಸೇರಿದಂತೆ ಎಲ್ಲಾ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.







