ನೀತಿ ಆಯೋಗದಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ: ಸದಾನಂದ ಗೌಡ
ತ್ರಾಸಿಯಲ್ಲಿ ‘ಕೊಂಕಣಿ ಖಾರ್ವಿ ಭವನ’ ಉದ್ಘಾಟನೆ

ಕುಂದಾಪುರ, ನ.21: ರಾಜ್ಯಗಳ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಅಧ್ಯಕ್ಷತೆಯಲ್ಲಿ ಎಲ್ಲ ಮುಖ್ಯಮಂತ್ರಿಗಳನ್ನೊಳಗೊಂಡ ನೀತಿ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು ಎಂದು ಕೇಂದ್ರ ಅಂಕಿಅಂಶ ಮತ್ತು ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ವತಿಯಿಂದ ತ್ರಾಸಿಯ ಹೊಸಾಡುವಿನಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ ಲಾದ ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ‘ಕೊಂಕಣಿ ಖಾರ್ವಿ ಭವನ’ವನ್ನು ಇಂದು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯಕ್ಕೆ 13ನೆ ಹಣಕಾಸು ಆಯೋಗದಲ್ಲಿ ಶೇ.32ರಷ್ಟು ಅಂದರೆ 75 ಸಾವಿರ ಕೋಟಿ ರೂ. ಅನುದಾನವನ್ನು ಈ ಮೊದಲು ನೀಡುತ್ತಿದ್ದರೆ, 2015-2020ನೆ ಸಾಲಿನಲ್ಲಿ ಶೇ.42ರಷ್ಟು ಅಂದರೆ 2 ಲಕ್ಷದ 12 ಸಾವಿರ ಕೋಟಿ ರೂ. ಅನುದಾನ ವನ್ನು ಕೇಂದ್ರ ನೀಡಲಿದೆ. ಆ ಮೂಲಕ ಕೇಂದ್ರ ಸರಕಾರ ರಾಜ್ಯಗಳಿಗೆ ಹೆಚ್ಚು ಅನುದಾನವನ್ನು ಒದಗಿಸುತ್ತಿದೆ ಎಂದರು.
ಉಡುಪಿ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ ಮಾತ ನಾಡಿ, ಕರಾವಳಿ ತೀರ ಪ್ರದೇಶವನ್ನು ಸಿಆರ್‌ಝಡ್-1 ರಿಂದ ಸಿಆರ್‌ಝಡ್ -2ಕ್ಕೆ ಸೇರಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. 60 ವರ್ಷ ಮೀರಿದ ಮೀನುಗಾರರಿಗೆ ಕನಿಷ್ಠ ಎರಡು ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕೊಂಕಣಿ ಖಾರ್ವಿ ಸಮೀಕ್ಷೆ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ಯನ್ನು ಮಹಾ ಜನಸಭಾದ ಅಧ್ಯಕ್ಷ ಕೆ.ಬಿ.ಖಾರ್ವಿ ವಹಿಸಿದ್ದರು. ಮಣಿಪಾಲ ಗ್ಲೋಬಲ್ ಎಜುಕೇಶನ್‌ನ ಚೇರ್‌ಮೆನ್ ಟಿ.ವಿ.ಮೋಹನ್‌ದಾಸ್ ಪೈ, ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಭಟ್ಕಳ ಶಾಸಕ ಮಾಂಕಳ ಸುಬ್ಬ ವೈದ್ಯ, ಕಾರವಾರ ಶಾಸಕ ಸತೀಶ ಸೈಲ್ ಮುಖ್ಯ ಅತಿಥಿಗಳಾಗಿದ್ದರು.
ದ.ಕ. ಉಡುಪಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಸಿಂಡಿಕೇಟ್ ಬ್ಯಾಂಕಿನ ಉಡುಪಿ ವಲಯ ಕಚೇರಿಯ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಹೊಸಾಡು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ತ್ರಾಸಿ ಗ್ರಾಪಂ ಅಧ್ಯಕ್ಷ ವೆಂಕಟ ಪೂಜಾರಿ, ಪ್ರದೀಪ ಜಿ. ಪೈ, ರವಿ ಟಿ.ನಾಯ್ಕಾ ಮೊದಲಾದವರು ಉಪಸ್ಥಿತರಿದ್ದರು.
ಕೊಂಕಣಿ ಖಾರ್ವಿ ಸಮೀಕ್ಷೆ ವರದಿಯ ಲೇಖಕ ಡಾ.ರವೀಂದ್ರ ರಾವ್ ಅವರನ್ನು ಗೌರವಿಸಲಾಯಿತು. ವಸಂತ ಖಾರ್ವಿ ಸ್ವಾಗತಿಸಿದರು. ಉಪಾಧ್ಯಕ್ಷ ಮೋಹನ ಬಾನಾವಳಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಉಮಾನಾಥ ವಂದಿಸಿದರು. ಬಿಂದು ಕೃಷ್ಣ ಖಾರ್ವಿ ಮತ್ತು ಪ್ರಶಾಂತ ಹೆಗಡೆ ಕಾರ್ಯಕ್ರಮ ನಿೂಪಿಸಿದರು.







