ವಿಮಾ ಕಂತಿನ ಮೇಲಿನ ಜಿಎಸ್‌ಟಿ ಹಿಂಪಡೆಯಲು ಆಗ್ರಹ: ವಿಮಾ ನೌಕರರ ಒಕ್ಕೂಟದ ಮಹಾಧಿವೇಶನದಲ್ಲಿ ನಿರ್ಣಯ
ಉಡುಪಿ, ನ.21: ಉಡುಪಿಯಲ್ಲಿ ಇಂದು ಮುಕ್ತಾಯಗೊಂಡ ನಾಲ್ಕು ದಿನಗಳ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ 11ನೆ ಮಹಾಧಿ ವೇಶನದಲ್ಲಿ ಜೀವವಿಮಾ ಕಂತಿನ ಮೇಲೆ ಹೇರಿರುವ ಜಿಎಸ್‌ಟಿಯನ್ನು ಹಿಂಪಡೆಯಬೇಕು ಸೇರಿದಂತೆ ಹಲವು ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳ ಲಾಯಿತು.
ಸರಕಾರದ ನವ ಆರ್ಥಿಕ ನೀತಿಯನ್ನು ಹಿಂಪಡೆಯಬೇಕು ಮತ್ತು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಈಗಿರುವ ಕಾರ್ಮಿಕ ಕಾನೂನು ಗಳನ್ನು ಬಲಗೊಳಿಸಬೇಕು. ಮಾಲೀಕರ ಪರವಾಗಿರುವ ಕಾರ್ಮಿಕ ಕಾನೂನು ಗಳನ್ನು ತಿದ್ದುಪಡಿ ಮಾಡಬಾರದು. ಕಾರ್ಮಿಕರಿಗೆ ಮಾರಕವಾಗಿರುವ ರಾಷ್ಟ್ರೀಯ ಪಿಂಚಣಿಯನ್ನು ರದ್ದುಪಡಿಸಿ ಖಾತರಿಪಡಿಸಿದ ಪಿಂಚಣಿಯನ್ನು ನೀಡಬೇಕು. ಎಲ್‌ಐಸಿಯಲ್ಲಿ 2010ರ ಎ.1ರ ನಂತರ ನೇಮಕಾತಿ ಹೊಂದಿದ ವರಿಗೆ ಎಲ್‌ಐಸಿಯಲ್ಲಿರುವ ಪಿಂಚಣಿ ಯೋಜನೆ 1995ರನ್ನು ಅ್ವಯಿಸುವಂತೆ ಜಾರಿಗೆ ತರಬೇಕು.
ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಬಲಗೊಳಿಸಬೇಕು. ವಿಮಾ ಪ್ರೀಮಿಯಂನ ಮೇಲಿನ ಸೇವಾ ತೆರಿಗೆಯನ್ನು ರದ್ದುಪಡಿಸಬೇಕು. ಎಲ್‌ಐಸಿಯಲ್ಲಿ ಮೂರು ಮತ್ತು ನಾಲ್ಕನೆ ದರ್ಜೆಯ ನೌಕರರ ನೇಮಕಾತಿ ಮಾಡಬೇಕು. ಜಾತಿ ಮತ್ತು ವರ್ಗದ ಜನರಿಗೆ ರಕ್ಷಣೆಯನ್ನು ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯ ಜಾರಿಗೆ ತರಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸುರಕ್ಷತೆ ನೀಡಬೇಕು. ಮಹಿಳಾ ಸಬಲೀಕರಣವನ್ನು ಒತ್ತಾಯಿಸಿ ಮತ್ತು ನೋಟು ಅಮಾನ್ಯೀಕರಣವನ್ನು ವಿರೋಧಿಸುವ ನಿರ್ಣಯ ಮಾಡಲಾ ಯಿತು.
ಸಾರ್ವಜನಿಕ ರಂಗದ ಸಾಮಾನ್ಯ ವಿಮಾ ಕಂಪೆನಿಗಳ ವಿಲಿನೀಕರಣ ಮಾಡಬೇಕು. ಸಾಮಾನ್ಯ ವಿಮಾ ನಿಗಮಗಳ ಬಂಡವಾಳ ಹಿಂತೆಗೆಯಬಾರದು. ಎಲ್‌ಐಸಿಯಲ್ಲಿ 1986ಗಿಂತ ಮೊದಲು ನಿವೃತ್ತಿಯಾದವರಿಗಿರುವ ಪಿಂಚಣಿ ಯನ್ನು ಹೆಚ್ಚಿಸಬೇಕು. 1997ರ ಆ.1ಕ್ಕೆ ಮೊದಲು ನಿವೃತ್ತಿಯಾದವರಿಗೆ ತುಟ್ಟಿ ಭತ್ಯೆಯಲ್ಲಿರುವ ತಾರತಮ್ಯವನ್ನು ಹೋಗಲಾಡಿಸಬೇಕು. ಕುಟುಂಬ ಪಿಂಚಣಿ ಯನ್ನು ಹೆಚ್ಚಿಸಬೇಕು. 1995ರ ಪಿಂಚಣಿ ಯೋಜನೆಗೆ ಸೇರದೆ ಉಳಿದವರಿಗೆ ಪಿಂಚಣಿ ಯೋಜನೆಗೆ ಸೇರಲು ಅವಕಾಶ ನೀಡಬೇಕು. ಅಖಿಲ ಭಾರತ ವಿಮಾ ನೌಕರರ ಸಂಘಕ್ಕೆ ಆಡಳಿತ ಮಂಡಳಿಯೊಂದಿಗೆ ವ್ಯವಹರಿಸಲು ಮಾನ್ಯತೆ ಮತ್ತು ಸಾಮೂಹಿಕ ಚೌಕಾಸಿಯ ಹಕ್ಕನ್ನು ನೀಡಬೇಕು. ಎಲ್‌ಐಸಿ ತಾತ್ಕಾಲಿಕ ನೌಕರ ರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಎಲ್‌ಐಸಿ ಆಡಳಿತ ಮಂಡಳಿ ಮತ್ತು ಕೇಂದ್ರ ಸರಕಾರವನ್ನು ಒತ್ತಾುಸುವ ನಿರ್ಣಯ ಕೈಗೊಳ್ಳ ಲಾಯಿತು.
ಈ ಸಂದರ್ಭದಲ್ಲಿ 2017-2019ನೆ ಸಾಲಿಗೆ ಪದಾಧಿಕಾರಿಗಳನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವೇಣುಗೋಪಾಲ್ ರಾವ್, ಉಪಾಧ್ಯಕ್ಷರುಗಳಾಗಿ ಮುಹಮದ್ ಮೆಹಬೂಬ್, ಎಸ್.ಕೆ.ಗೀತಾ, ಪಿ. ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಕ್ಲೆಮೆಂಟ್ ಕ್ಸೇವಿಯರ್ ದಾಸ್, ಜತೆ ಕಾರ್ಯದರ್ಶಿಗಳಾಗಿ ಜೆ.ಸುರೇಶ್, ಕೆ.ಜಯತೀರ್ಥ, ಕಿಶೋರ್ ಕುಮಾರ್, ಖಜಾಂಚಿಯಾಗಿ ಜಿ.ಜಿ.ಮಧುಸೂದನ್ ರಾವ್, ಉಪ ಖಜಾಂಚಿಯಾಗಿ ರಾಜೇಶ್ ಸಿಂಗ್ ಆಯ್ಕೆಯಾದರು.







