ಜಗತ್ತಿನಲ್ಲಿ ಸಾಕಷ್ಟು ಒಳ್ಳೆಯ ವ್ಯಕ್ತಿಗಳಿದ್ದಾರೆ-ಕು.ಗೋ.
ಬೋಳಂತಕೋಡಿ ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು, ನ. 21: ಜಗತ್ತಿನಲ್ಲಿ ಸಾಕಷ್ಟು ಒಳ್ಳೆಯ ವ್ಯಕ್ತಿಗಳಿದ್ದು, ಜಗತ್ತೇ ಹಾಳಾಗಿದೆ ಎಂದು ಭಾವಿಸುವುದು ಸರಿಯಲ್ಲ. ಒಳ್ಳೆಯವರೊಂದಿಗೆ ಸಹವಾಸ ಮಾಡಿಕೊಳ್ಳುವ, ಅವರನ್ನು ಪ್ರೀತಿಸುವ ಮನೋಸ್ಥಿತಿಯಿಲ್ಲದಿದ್ದರೂ ಅವರನ್ನು ಧ್ವೇಷಿಸುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹಾಸ್ಯ ಸಾಹಿತಿ ಉಡಪಿಯ ಹೆರ್ಗ ಗೋಪಾಲ ಭಟ್(ಕು.ಗೋ) ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕ ಹಾಗೂ ಜ್ಞಾಗಗಂಗಾ ಪುಸ್ತಕ ಮಳಿಗೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಆರಂಭಗೊಂಡು ಏಳು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸೌರಭ- ಪುಸ್ತಕ ಹಬ್ಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಬೋಳಂತಕೋಡಿ ಅಭಿಮಾನಿ ಬಳಗ ಕೊಡಮಾಡುವ ‘ಬೋಳಂತಕೋಡಿ ಕನ್ನಡ ಪ್ರಶಸ್ತಿ -2017’ ಸ್ವೀಕರಿಸಿ ಮಾತನಾಡಿದರು.
ಮಾಧ್ಯಮಗಳ ಮೂಲಕ ಜಗತ್ತನ್ನು ನೋಡುವಾಗ ಎಲ್ಲವೂ ಹಾಳಾಗುತ್ತಿದೆ. ಒಳ್ಳೆಯತನವೆಲ್ಲ ನಾಶವಾಗುತ್ತಿದೆ ಎಂಬ ಭಾವನೆ ಬರುವುದು ಸಹಜ. ಆದರೆ ಇದನ್ನೇ ಜಗತ್ತೆಂದು ಪರಿಭಾವಿಸಬೇಕಾಗಿಲ್ಲ, ಅದರಾಚೆಗೂ ಬಹುದೊಡ್ಡ ಜಗತ್ತಿದೆ. ಅಲ್ಲೆಲ್ಲ ಸದ್ದಿಲ್ಲದೆ ಹಲವಾರು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಒಳ್ಳೆಯವರು ಸಾಕಷ್ಟಿದ್ದಾರೆ ಎಮಬುದನ್ನು ಅಥೈಸಿಕೊಳ್ಳಬೇಕು. ಇನ್ನೊಬ್ಬರನ್ನು ಪ್ರೀತಿಸಲಾಗದಿದ್ದರೂ ಯಾರನ್ನೂ ದ್ವೇಷಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ದಿನ ನಿತ್ಯದ ಜಾಗತಿಕ ವರ್ತಮಾನಗಳನ್ನು ನೋಡುವಾಗ, ಓದುವಾಗ ಇಡೀ ಜಗತ್ತೇ ಕೆಟ್ಟು ಹೋಗಿದೆ ಎಂದು ಅನಿಸಿ ಬಿಡುವುದುಂಟು. ಅಂಥದೊಂದು ಅವಸರದ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂದು ಹೇಳಿದರು.
ಕು.ಗೋ. ಅವರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ವಿಷರ್ಮಕ ಬೆಳಗೋಡು ರಮೇಶ್ ಭಟ್ ಅವರು ಕನ್ನಡ ನಾಡಿನ ನೂರಾರು ಸಾಹಿತಿಗಳನ್ನು, ಅವರ ಪುಸ್ತಕಗಳನ್ನು ಜನ ಮಾನಸಕ್ಕೆ ಪರಿಚಯ ಮಾಡಿದವರು ಕು.ಗೋ. ಕೃತಿಗಳನ್ನು ಜನರ ಬಳಿಗೆ ಒಯ್ಯುವ ಮೂಲಕ ಸಾಹಿತ್ಯದ ಮಹಾನ್ ಪರಿಚಾರಕರಾದರು. ತಮ್ಮ ನಿವೃತ್ತ ಜೀವನವನ್ನು ಪೂರ್ತಿಯಾಗಿ ಸಾಹಿತ್ಯ ಸೇವೆಗೆ ಮುಡಿಪಾಗಿಟ್ಟ ಅವರು ಪಿಂಚಣಿಯ ದುಡ್ಡನ್ನೆಲ್ಲ ಪುಸ್ತಕ ಖರೀದಿಸಿ ಹಂಚಲು ಬಳಸಿದ್ದಾರೆ. ಸಾಕಷ್ಟು ಪುಸ್ತಕಗಳನ್ನು ಖರೀದಿಸಿ ಶಾಲಾ ಮಕ್ಕಳಿಗೆ ಹಂಚಿದ್ದಾರೆ ಎಂದರು.
ಪುತ್ತೂರು ರಾಜೇಶ್ ಪವರ್ ಪ್ರೆಸ್‌ನ ಮಾಲೀಕ ಎಂ.ಎಸ್. ರಘುನಾಥ ರಾವ್ ‘ಸಾಹಿತ್ಯ ಸೌರಭ - ಪುಸ್ತಕ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ನೂರಾರು ಪುಸ್ತಕಗಳನ್ನು ಪ್ರಕಾಶಿಸಿದ ಬೋಳಂತಕೋಡಿ ಈಶ್ವರ ಭಟ್ ಅವರ ಜತೆಗಿನ ಒಡನಾಟವನ್ನು ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ, ಅಂಕಣಕಾರ ಪ್ರೊ. ವಿ.ಬಿ. ಅರ್ತಿಕಜೆ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಕುಮಾರಿ ಅಪೂರ್ವ ಕೊಲ್ಯ ಅವರು ಬರೆದ ‘ಚಿತ್ತ ಚೋರ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಉಪನ್ಯಾಸಕಿ ಡಾ.ಶೋಭಿತಾ ಸತೀಶ್ ಕೃತಿ ಪರಿಚಯ ಮಾಡಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕಾ ಉಪಸ್ಥಿತರಿದ್ದರು. ನ್ಯಾಯವಾದಿ ಕೆ.ಆರ್. ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ. ಶ್ರೀಧರ್ ಎಚ್.ಜಿ. ಕಾರ್ಯಕ್ರಮ ನಿರ್ವಹಿಸಿದರು. ಜ್ಞಾನ ಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡೆಂಕಿರಿ, ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಎನ್.ಕೆ. ಜಗನ್ನಿವಾಸ ರಾವ್, ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ, ಅಂಕಣಕಾರ, ಪತ್ರಕರ್ತ ನಾ.ಕಾರಂತ ಪೆರಾಜೆ ಹಾಜರಿದ್ದರು.







