ನನ್ನ ವಿರುದ್ಧದ ಆರೋಪ ಸಾಬೀತಾದರೆ ಹುದ್ದೆಯಿಂದ ನಿರ್ಗಮನ: ಮೂರ್ತಿ
‘ದಲಿತನೆಂಬ ಕಾರಣಕ್ಕೆ ಸುಳ್ಳು ದೂರು’
ಬೆಳಗಾವಿ, ನ. 21: ‘ನನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸಾಬೀತುಪಡಿಸಿದ್ದೇ ಆದರೆ ತಕ್ಷಣವೇ ನನ್ನ ಹುದ್ದೆಯಿಂದ ನಿರ್ಗಮಿಸುವೆ. ತಾನು ದಲಿತ ಸಮುದಾಯದಿಂದ ಬಂದಿದ್ದೇನೆ ಎಂದು ನನ್ನ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಲಾಗುತ್ತಿದೆ’ ಎಂದು ವಿಧಾನಸಭೆ ಕಾರ್ಯದರ್ಶಿ ವಿ.ಮೂರ್ತಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲಿನ ಆರೋಪ ಶುದ್ದ ಸುಳ್ಳು. ನನ್ನ ವಿರುದ್ಧ ಒಂದು ಗುಂಪು ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ನಾನು ನನ್ನ ಕಚೇರಿಯ ಮಹಿಳಾ ಸಿಬ್ಬಂದಿಯನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದ್ದೇನೆ ಎಂದು ವಿವರಣೆ ನೀಡಿದರು.
ನನಗೂ ಮದುವೆ ವಯಸ್ಸಿಗೆ ಬಂದಿರುವ ಮಗಳಿದ್ದು, ಇಂತಹ ಸಂದರ್ಭದಲ್ಲಿ ನಾನೇಕೆ ಅವರಿಗೆ ಲೈಂಗಿಕ ಕಿರುಕುಳ ನೀಡಲಿ. ಮಹಿಳೆಯನ್ನು ಕಡಲ ಕಿನಾರೆ(ಬೀಚ್)ಗೆ ಕರೆಯಲು ನಾನು ಹುಡುಗನಲ್ಲ. ಲೈಂಗಿಕ ಕಿರುಕುಳ ಆರೋಪ ಮಾಡುವವರಿಗೆ ವಿಧಾನಸೌಧದಲ್ಲಿ ಇರುವ ಮಹಿಳಾ ದೂರು ಪ್ರಾಧಿಕಾರಕ್ಕೆ ದೂರು ನೀಡುವುದಿಲ್ಲ. ವಿಧಾನಸೌಧ ಪೋಲೀಸ್ ಠಾಣೆಗೂ ದೂರು ನೀಡುವುದಿಲ್ಲ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಸುದ್ದಿಗಳನ್ನು ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಹಬ್ಬಿಸಲಾಗುತ್ತಿದೆ. ಈ ಹಿಂದೆ ಕಾರ್ಯದರ್ಶಿ ಸ್ಥಾನದಲ್ಲಿದ್ದವರು ಇದನ್ನೆಲ್ಲ ಮಾಡಿಸುತ್ತಿದ್ದಾರೆ. ನನ್ನ ವಿರುದ್ಧದ ಆರೋಪ ಸಾಬೀತು ಮಾಡಲಿ ಎಂದು ಮೂರ್ತಿ ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.







