ಮೆಕ್ಕೆಜೋಳ ಖರೀದಿಗೆ ಕೇಂದ್ರದ ಸಹಕಾರ ಅಗತ್ಯ: ಕೃಷ್ಣ ಭೈರೇಗೌಡ
ಬೆಳಗಾವಿ, ನ.21: ಮೆಕ್ಕೆಜೋಳವನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಕೇಂದ್ರ ಸರಕಾರ ಖರೀದಿಗೆ ಮುಂದಾದರೆ, ರಾಜ್ಯ ಸರಕಾರದ ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ಪರವಾಗಿ ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಶ್ರೀನಿವಾಸಮಾನೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, 2013-14ರಲ್ಲಿ 7.07 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಲಾಗಿತ್ತು. ಈ ಬಾರಿಯೂ ಮೆಕ್ಕೆಜೋಳ ಬೆಲೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ನಮ್ಮ ರಾಜ್ಯದಲ್ಲಿ 28 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, 6 ಲಕ್ಷ ಟನ್ ಖರೀದಿ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು ಎಂದರು.
2014ರಿಂದ ಕೇಂದ್ರ ಸರಕಾರ ಹೊಸ ಮಾನದಂಡಗಳನ್ನು ಮಾಡಿಕೊಂಡಿದ್ದು, ಮೆಕ್ಕೆಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸುವಂತೆ ಸೂಚಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ಅದು ಕಾರ್ಯ ಸಾಧುವಲ್ಲ. ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿಸುವುದು ಪ್ರಚಲಿತ ಸಮಸ್ಯೆಯಾಗಿದ್ದು, ಶಿವಮೊಗ್ಗ, ಹಾವೇರಿ, ದಾವಣಗೆರೆ, ಹಾಸನ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿದರು.
ಎರಡು ದಿನಗಳ ಹಿಂದೆ ನಾನು ಹಾಗೂ ಆರೋಗ್ಯ ಸಚಿವರು ದಿಲ್ಲಿಗೆ ತೆರಳಿ, ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮೆಕ್ಕೆಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಸರಕಾರವು ಮೆಕ್ಕೆಜೋಳ ಖರೀದಿಗೆ ಮುಂದಾದಲ್ಲಿ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಅಗತ್ಯ ಸಹಕಾರವನ್ನು ನೀಡಲಿದೆ ಎಂದು ಅವರು ತಿಳಿಸಿದರು.







