ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ: ರೈತರ ಪ್ರತಿಭಟನೆ

ಮಡಿಕೇರಿ, ನ.21: ರೈತರ ಸಾಲ ಮನ್ನಾ, ಮತ್ತು ಕೃಷಿ ತಜ್ಞ ಡಾ. ಸ್ವಾಮಿ ನಾಥನ್ ಸಮಿತಿ ವರದಿ ಜಾರಿಗೆ ಆಗ್ರಹಿಸಿ ದಿಲ್ಲಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಕೊಡಗು ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಮುಖಂಡರಾದ ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿಕುಮಾರ್ ಸೇರಿದಂತೆ ಹಲವು ರೈತ ಮುಖಂಡರು ಜಿಲ್ಲೆಯಿಂದ ಪಾಲ್ಗೊಂಡಿದ್ದರು.
ಕಿಸಾನ್ ಸಂಸತ್ ಹೆಸರಿನಲ್ಲಿ ದೇಶಾದ್ಯಂತ ಇರುವ ವಿವಿಧ ರೈತ ಸಂಘಟನೆಗಳ ಒಕ್ಕೂಟ ಈ ಪ್ರತಿಭಟನೆಯನ್ನು ಸಂಘಟಿಸಿದ್ದು, ಎಲ್ಲ ರಾಜ್ಯಗಳಿಂದಲೂ ರೈತರೂ ಭಾಗವಹಿಸಿದ್ದರು. ದಿಲ್ಲಿಯ ರಾಮಲೀಲಾ ಮೈದಾನ ಮತ್ತು ಸಂಸತ್ ಭವನ ರಸ್ತೆಯಲ್ಲಿ ಜಮಾವಣೆಗೊಂಡ ರೈತರು ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದರು.
ಕೃಷಿಯಲ್ಲಿ ಮಹಿಳೆಯ ಪಾತ್ರ, ಮಹಿಳೆ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಸಮಲೋಚನೆ ನಡೆಯಿತು. ಹಲವು ಕೃಷಿ ಸಮಸ್ಯೆಗಳ ಬಗ್ಗೆಯೂ ಚಚೆ ನಡೆಯಿತು. ದೇಶಾದ್ಯಂತ ಬರ, ನೆರೆ, ಬೆಳೆ ನಷ್ಟ ಮತ್ತು ಅವೈಜ್ಞಾನಿಕ ಬೆಲೆ ನಿಗದಿಯಿಂದ ಪ್ರತಿ ವರ್ಷ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊ ಳ್ಳುತ್ತಿದ್ದಾರೆ ಇದನ್ನು ತಪ್ಪಿಸಲು ಮತ್ತು ರೈತರಿಗೆ ಧೈರ್ಯ ತುಂಬಲು ಕೂಡಲೇ ದೇಶದ ರೈತರು ಮಾಡಿರುವ ಎಲ್ಲ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಲೇಬೇಕೆಂದು ಒತ್ತಾಯಿಸಲಾಯಿತು.
ಎಲ್ಲ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕ್ರಮ ಕೈಗೊಳ್ಳಬೇಕು ಉತ್ಪಾದನಾ ವೆಚ್ಚ ಆದರಿಸಿ ಪ್ರತಿ ಬೆಳೆಗೂ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಲಾಯಿತು. ತಕ್ಷಣವೇ ಡಾ. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು. ಉತ್ತರ ಕರ್ನಾಟಕ ಜಿಲ್ಲೆಗಳ ನೀರಿನ ಬವಣೆ ನೀಗಿಸುವ ಕಳಸಾ ಬಂಡೂರಿ ಯೋಜನೆಯ ಶೀಘ್ರ ಆರಂಭಕ್ಕೆ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸುವಂತೆ ಹಾಗೂ ರೈತರ ಬೆಳೆ ವಿಮೆ ಜಿಲ್ಲೆಯ ರೈತರಿಗೆ ದೊರಕಿಲ್ಲ ಇದರ ಹೊಣೆಯನ್ನು ಆಯಾ ಜಿಲ್ಲಾಧಿಕಾರಿ ಹೊರಬೇಕೆಂದು ಒತ್ತಾಯಿಸಲಾಯಿತು.







