ಲಾಡ್ಜ್‌ನಲ್ಲಿ ಸಂಶಯಾಸ್ಪದ ತಂಗಿದ್ದವರ ವಿರುದ್ಧ ಎಫ್‌ಐಆರ್

ಮಡಿಕೇರಿ, ನ.21: ಭಾಗಮಂಡಲದ ಲಾಡ್ಜ್‌ವೊಂದರಲ್ಲಿ ಸಂಶಯಾಸ್ಪದವಾಗಿ ತಂಗಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಹುಣಸೂರು ನಿವಾಸಿಗಳಾದ ಮುಹಮ್ಮದ್ ಜಾಹಿದ್, ರಾಝಿಕ್ ಹಾಗೂ ಲಾಡ್ಜ್ ಮಾಲಕ ಹಿತಕರ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನ.20ರಂದು ಸೋಮವಾರ ಭಾಗಮಂಡಲ ಲಾಡ್ಜ್‌ನಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ತಂಗಿದ್ದರು. ಇವರ ನಡೆಯನ್ನು ಗಮನಿಸಿ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ಲಾಡ್ಜ್‌ಗೆ ತೆರಳಿ ತಪಾಸಣೆ ನಡೆಸಿದ ಪೊಲೀಸರು ಇಬ್ಬರು ಯುವಕರು ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.
ಈ ಸಂದಭ ಯುವತಿ ಒಡಿಸ್ಸಾ ಮೂಲದವಳೆಂದು ತಿಳಿದು ಬಂದಿದ್ದು, ಬೆಂಗಳೂರು ಮೊಬೈಲ್ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದ ಈಕೆ ತನ್ನ ಸಹುದ್ಯೋಗಿಯೊಂದಿಗೆ ಭಾಗಮಂಡಲ ಲಾಡ್ಜ್‌ಗೆ ಆಗಮಿಸಿದ್ದಾಳೆ. ಇವರೊಂದಿಗೆ ಹುಣಸೂರಿನ ಮತ್ತೊಬ್ಬ ಯುವಕನೂ ಬಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಯುವಕರೊಂದಿಗೆ ಓರ್ವ ಯುವತಿ ಲಾಡ್ಜ್‌ನಲ್ಲಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಒದಗಿಸಿದ ಹಿನ್ನೆಲೆ ಯುವಕರು ಹಾಗೂ ಹೊಟೇಲ್ ಮಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







