ಪ್ರಧಾನ ಸುತ್ತಿಗೆ ಕಶ್ಯಪ್ ಪ್ರವೇಶ
ಹಾಂಕಾಂಗ್ ಓಪನ್ ಸೂಪರ್ ಸರಣಿ

ಕೌಲೂನ್, ನ.21:ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ 400,000 ಡಾಲರ್ ಬಹುಮಾನ ಮೊತ್ತದ ಹಾಂಕಾಂಗ್ ಓಪನ್ ಸೂಪರ್ ಬ್ಯಾಡ್ಮಿಂಟನ್ ಸರಣಿಯ ಅರ್ಹತಾ ಸುತ್ತಿನಲ್ಲಿ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಇಲ್ಲಿ ಮಂಗಳವಾರ ಆರಂಭವಾದ ಪುರುಷರ ಸಿಂಗಲ್ಸ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಶ್ಯಪ್ ಹಾಂಕಾಂಗ್‌ನ ಆಟಗಾರ ಲೀ ಚೆವುಕ್ ಯು ಅವರನ್ನು 21-13, 21-19 ಗೇಮ್‌ಗಳ ಅಂತರದಿಂದ ಸೋಲಿಸಿದರು. ಮತ್ತೊಂದು ಕ್ವಾಲಿಫೈಯರ್ ಪಂದ್ಯದಲ್ಲಿ ಚೈನೀಸ್ ತೈಪೆಯ ಕಾನ್ ಚಾವೊರನ್ನು 21-12, 21-10 ಗೇಮ್‌ಗಳ ಅಂತರದಿಂದ ಸೋಲಿಸಿದರು.
ಕಶ್ಯಪ್ ಪ್ರಧಾನ ಸುತ್ತಿನಲ್ಲಿ ಕೊರಿಯಾದ ಲೀ ಡಾಂಗ್ ಕೆವುನ್‌ರನ್ನು ಎದುರಿಸಲಿದ್ದಾರೆ.
ಭಾರತದ ಪುರುಷರ ಡಬಲ್ಸ್ ಜೋಡಿ ಅರ್ಜುನ್ ಎಂಆರ್ ಹಾಗೂ ರಾಮಚಂದ್ರನ್ ಶ್ಲೋಕ್ ಮೊದಲ ಪಂದ್ಯದಲ್ಲಿ ಹಾಂಕಾಂಗ್‌ನ ಲಿ ಕ್ಯೂಯೆನ್ ಹಾನ್ ಹಾಗೂ ಯೆವುಂಗ್ ಶಿಂಗ್ ಚೊರನ್ನು 21-14, 21-18 ಗೇಮ್‌ಗಳಿಂದ ಮಣಿಸಿದರು. ಆದರೆ, ಮತ್ತೊಂದು ಪಂದ್ಯದಲ್ಲಿ ಕೊರಿಯಾದ ಜೋಡಿ ಕಿಮ್ ವನ್ ಹೊ ಹಾಗೂ ಸೆವುಂಗ್ ಜಾ ಸಿಯೊ ವಿರುದ್ಧ 19-21, 17-21 ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್‌ಶಿಪ್ ಜಯಿಸಿದ್ದ ಭಾರತದ ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಹಫೀಝ್ ಫೈಝಲ್ ಹಾಗೂ ಗ್ಲೋರಿಯ ಇಮಾನ್ಯುಯೆಲ್ ವಿರುದ್ಧ 18-21, 11-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.







