ವಿಶ್ವ ಹಾಕಿ ಲೀಗ್ ಫೈನಲ್‌ನಲ್ಲಿ ಭಾರತಕ್ಕೆ ಒತ್ತಡವಿದೆ: ಲಾಕ್ರಾ

ಬೆಂಗಳೂರು, ನ.21: ಮುಂದಿನ ತಿಂಗಳು ಭುವನೇಶ್ವರದಲ್ಲಿ ಆರಂಭವಾಗಲಿರುವ ವಿಶ್ವ ಹಾಕಿ ಲೀಗ್ ಫೈನಲ್‌ನಲ್ಲಿ ಆತಿಥೇಯ ಭಾರತ ಸ್ವಲ್ಪಮಟ್ಟಿನ ಒತ್ತಡ ಎದುರಿಸಲಿದೆ ಎಂದು ಬೀರೇಂದ್ರ ಲಾಕ್ರಾ ಹೇಳಿದ್ದಾರೆ.
ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯು ಡಿ.1 ರಿಂದ 10ರ ತನಕ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಿಂದ ದೂರ ಉಳಿದಿದ್ದ ಲಾಕ್ರಾ ತನ್ನ ತವರು ಮೈದಾನದಲ್ಲಿ ಭಾರತ ತಂಡಕ್ಕೆ ವಾಪಸಾಗುತ್ತಿದ್ದಾರೆ.
‘‘ವಿಶ್ವ ಹಾಕಿ ಲೀಗ್‌ನಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಒತ್ತಡವಿರುವುದು ಸಾಮಾನ್ಯ. ನಾವು ವಿಶ್ವದ ಅಗ್ರ-7 ತಂಡಗಳ ವಿರುದ್ಧ ಆಡಬೇಕಾಗುತ್ತದೆ. ನನ್ನ ತವರು ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಆಡಲು ನಾನು ಉತ್ಸುಕನಾಗಿದ್ದೇನೆ. ನನ್ನ ಹಲವು ಸ್ನೇಹಿತರು, ಕುಟುಂಬ ಸದಸ್ಯರು ನಮ್ಮ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಒಡಿಶಾದ ಜನತೆಗೆ ಹಾಕಿ ಎಂದರೆ ತುಂಬಾ ಇಷ್ಟ. ಭಾರತೀಯ ಹಾಕಿ ತಂಡಕ್ಕೆ ಒಡಿಶಾ ಯಾವಾಗಲೂ ವಿಶೇಷ ತಾಣವಾಗಿದೆ’’ ಎಂದು ಲಾಕ್ರಾ ಅಭಿಪ್ರಾಯಪಟ್ಟರು.
ಲಾಕ್ರಾರಲ್ಲದೆ ಇತರ ಇಬ್ಬರು ಆಟಗಾರರಾದ ಡಿಪ್ಸನ್ ಟಿರ್ಕಿ ಹಾಗೂ ಅಮಿತ್ ರೋಹಿದಾಸ್ ಕೂಡ ತವರು ಮೈದಾನದಲ್ಲಿ ಎಚ್‌ಡಬ್ಲು ಎಲ್ ಟೂರ್ನಿ ಆಡಲಿದ್ದಾರೆ. ರೋಹಿದಾಸ್ ಈ ವರ್ಷದ ಹಾಕಿ ಇಂಡಿಯಾ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟಿರ್ಕಿ ಜೂನಿಯರ್ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದು, ಸೀನಿಯರ್ ತಂಡಕ್ಕೆ ಹೊಂದಿಕೊಳ್ಳುತ್ತಿದ್ದಾರೆ.





