ಒಳ್ಳೆಯ ಮಗುವಿನಂತೆ ವರ್ತಿಸಿ, ಬಾಕಿ ಚುಕ್ತಾಗೊಳಿಸಿ : ಜೇಪೀ ಇನ್ಫ್ರಾಟೆಕ್ ಸಂಸ್ಥೆಗೆ ಸುಪ್ರೀಂ ಆದೇಶ

ಹೊಸದಿಲ್ಲಿ, ನ.22: ಜೇಪೀ ಇನ್‌ಫ್ರಾಟೆಕ್ ದಿವಾಳಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಒಳ್ಳೆಯ ಮಗುವಿನಂತೆ ವರ್ತಿಸಬೇಕು’ ಎಂದು ಜೇಪೀ ಅಸೋಸಿಯೇಟ್ಸ್‌ಗೆ ತಿಳಿಸಿದ್ದು ಡಿ.31ರ ಒಳಗೆ 2 ಕಂತಿನಲ್ಲಿ 275 ಕೋಟಿ ರೂ. ಠೇವಣಿ ಇರಿಸುವಂತೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠವು ಡಿ.14ರಂದು 150 ಕೋಟಿ ರೂ. ಹಾಗೂ ಡಿ.31ರಂದು 125 ಕೋಟಿ ರೂ. ಠೇವಣಿ ಇಡುವಂತೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಜನವರಿ 10ಕ್ಕೆ ನಿಗದಿಗೊಳಿಸಿದ ನ್ಯಾಯಾಲಯ, ಯಾವುದೇ ಪ್ರವರ್ತಕ ನಿರ್ದೇಶಕರು ಹಾಗೂ ಸ್ವತಂತ್ರ ನಿರ್ದೇಶಕರು ತಮ್ಮ ವೈಯಕ್ತಿಕ ಆಸ್ತಿಗಳನ್ನು ಪರಭಾರೆ ಮಾಡಬಾರದು ಎಂದು ಸೂಚಿಸಿತು. ವಕೀಲ ಪವನ್‌ಶ್ರೀ ಅಗರ್‌ವಾಲ್‌ರನ್ನು ಪ್ರಕರಣದ ಬಗ್ಗೆ ಸಲಹೆಗಾರರನ್ನಾಗಿ ನೇಮಿಸಿದ ನ್ಯಾಯಪೀಠ, ಫ್ಲಾಟ್‌ಗಳನ್ನು ಖರೀದಿಸಿದವರು ಹಾಗೂ ತಮ್ಮ ಹಣ ಮರುಪಾವತಿಸಬೇಕೆಂದು ಕೋರಿಕೆ ಸಲ್ಲಿಸಿದವರೂ ಸೇರಿದಂತೆ ಜೇಪೀ ಇನ್‌ಫ್ರಾಟೆಕ್‌ನ ಸಂಪೂರ್ಣ ಮಾಹಿತಿ ನೀಡುವ ಪೋರ್ಟಲ್ ಸಿದ್ಧಪಡಿಸುವಂತೆ ಅಗರ್‌ವಾಲ್‌ಗೆ ತಿಳಿಸಿದೆ.
ಜೇಪೀ ಅಸೋಸಿಯೇಟ್ಸ್‌ನ ಸಹಸಂಸ್ಥೆ ಜೇಪೀ ಇನ್‌ಫ್ರಾಟೆಕ್ ಸಾಲದ ಕಂತು ಮರುಪಾವತಿಸಲು ವಿಫಲವಾದ ಕಾರಣ ಆ ಸಂಸ್ಥೆಯ ವಿರುದ್ಧ ದಿವಾಳಿ ಕ್ರಮ ಕೈಗೊಳ್ಳಬೇಕೆಂದು ಐಡಿಬಿಐ ಬ್ಯಾಂಕ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಅಲ್ಲಹಾಬಾದ್‌ನ ‘ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್’ನಲ್ಲಿ ದಿವಾಳಿಕ್ರಮದ ಕುರಿತ ವಿಚಾರಣೆ ನಡೆಯುತ್ತಿದೆ.





