ಬೆಂಗಳೂರು: ನ.24 ರಿಂದ ಅಂತಾರಾಷ್ಟ್ರೀಯ ಆಹಾರ ಮೇಳ
ಬೆಂಗಳೂರು, ನ.22: ನಗರದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಆಹಾರ ಮೇಳವನ್ನು ನ.24 ರಿಂದ ಮೂರು ದಿನಗಳ ರೆಡ್ ರಿಬ್ಬನ್ ಸಂಸ್ಥೆ ವತಿಯಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಅನಿಲ್ ಗುಪ್ತಾ, ಮೂರು ದಿನಗಳ ಕಾಲ ನಡೆಯಲಿರುವ ಆಹಾರ ಮೇಳದಲ್ಲಿ ರಾಜ್ಯದ ಆಹಾರ ಮಾತ್ರವಲ್ಲದೆ, ದೇಶ-ವಿದೇಶಗಳಿಂದ ವಿವಿಧ ರೀತಿಯ ತಿಂಡಿ-ತಿನಿಸುಗಳ 150 ಕ್ಕೂ ಅಧಿಕ ಮಳಿಗೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಭಕ್ಷಗಳು ಲಭ್ಯವಾಗಲಿವೆ ಎಂದು ತಿಳಿಸಿದರು.
ಸೂಪರ್ ರುಚೀಸ್ ಎನ್ನುವ ವಿನೂತನ ರೀತಿಯಲ್ಲಿ ಆಯೋಜಿಸುತ್ತಿರುವ ಈ ಮೇಳದಲ್ಲಿ ಅಪ್ಪಟ ಸಸ್ಯಾಹಾರಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲದೆ, ಆಯಾ ಪ್ರಾದೇಶಿಕ ಸವಿರುಚಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದವರು, 20 ರೂ.ನಿಂದ ಆರಂಭವಾಗಿ 200 ರೂ.ಗಳ ವರೆಗೂ ದರ ನಿಗದಿಪಡಿಸಲಾಗಿದೆ. ಪ್ರಮುಖವಾಗಿ ಹೈದರಾಬಾದ್ ವೆಜ್ ಬಿರಿಯಾನಿ, ಜಪಾನ್, ಚೈನೀಸ್ ಮತ್ತು ಉತ್ತರ ಕರ್ನಾಟಕದ ತಿಂಡಿ ತಿನಿಸುಗಳು ಗ್ರಾಹಕರ ಗಮನ ಸೆಳೆಯಲಿವೆ ಎಂದು ಹೇಳಿದರು.
ವಿಯೆಟ್ನಾಂನಿಂದ ಬರುವ ತಂಡವೊಂದು ಮೇಳದಲ್ಲಿ ಸ್ಟಾಲ್ ಹಾಕಲಿದ್ದು, ಅಲ್ಲಿ 20 ಬಗೆಯ ತಿಂಡಿ ತಿನಿಸುಗಳು 30-50 ರೂ.ಗಳ ದರದಲ್ಲಿ ಲಭ್ಯವಾದರೆ, ವಿವಿಧ 30 ಬಗೆಯ ಕಾಫಿ ಮತ್ತು 100 ಬಗೆಯ ಐಸ್ ಕ್ರೀಂಗಳು ಲಭ್ಯವಾಗಲಿವೆ ಎಂದು ಅವರು ವಿವರಿಸಿದರು.
ಮೇಳದಲ್ಲಿ ಭರತನಾಟ್ಯ, ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಫ್ಯಾಷನ್ ಷೋ, ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆಹಾರ ಮೇಳವನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ತು ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.







