ಕಾರ್ಮಿಕ ಕಾಯ್ದೆಗೆ ಒತ್ತಾಯಿಸಿ ನ.23ರಂದು 'ಬೆಳಗಾವಿ ಚಲೋ'
ಬೆಂಗಳೂರು, ನ.22: ರಾಜ್ಯದಲ್ಲಿರುವ ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಹಾಗೂ ಕಾರ್ಮಿಕ ಕಾಯ್ದೆಯಲ್ಲಿರುವ ಎಲ್ಲ ಅಂಶಗಳನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಕಾರ್ಯಕರ್ತರು ನ.23ರಂದು 'ಬೆಳಗಾವಿ ಚಲೋ' ಹಮ್ಮಿಕೊಂಡಿದ್ದಾರೆ.
ರಾಜ್ಯದ ಮಹಾನಗರ ಪಾಲಿಕೆಗಳು, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳಲ್ಲಿ ಪೌರಕಾರ್ಮಿಕರು, ವಾಟರ್ ಮ್ಯಾನ್, ಇಲೆಕ್ಟ್ರೀಷಿಯನ್, ಕಂಪ್ಯೂಟರ್ ಆಪರೇಟರ್, ಕಚೇರಿ ಸಹಾಯಕರಾಗಿ ಹಲವು ವರ್ಷಗಳಿಂದ ಗುತ್ತಿಗೆ ಇಲ್ಲವೆ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಲು ರಾಜ್ಯ ಸರಕಾರ ಮೀಣ ಮೇಷ ಎಣಿಸುತ್ತಿರುವುದು ಸರಿಯಲ್ಲವೆಂದು ಮುನ್ಸಿಪಲ್ ಕಾರ್ಮಿಕ ಸಂಘ ಅಭಿಪ್ರಾಯಿಸಿದೆ.
ಕಾರ್ಮಿಕ ಕಾಯ್ದೆಯಲ್ಲಿರುವ ಕನಿಷ್ಠ ವೇತನ ಜಾರಿಗೊಳಿಸಬೇಕು. ಸರಕಾರವೇ ಘೋಷಿಸಿರುವಂತೆ ಪ್ರತೀ ಸ್ಥಳೀಯ ಸಂಸ್ಥೆಯಲ್ಲಿ ಪೌರಕಾರ್ಮಿಕನನ್ನು ‘ನಾಮಿನಿ’ ಸದಸ್ಯನನ್ನಾಗಿ ನೇಮಿಸಬೇಕು. ಕಸ ಸಂಗ್ರಹಣೆಯಲ್ಲಿ ಪೌರಕಾರ್ಮಿಕರೊಂದಿಗೆ ಕೆಲಸ ಮಾಡುವ ಆಟೊ ಚಾಲಕರು, ಸಹಾಯಕರು, ವಾಟರ್ ಮ್ಯಾನ್‌ಗಳಿಗೆ ಉಪಾಹಾರ ನೀಡಬೇಕೆಂದು ಒತ್ತಾಯಿಸಿ 'ಬೆಳಗಾವಿ ಚಲೋ' ಹಮ್ಮಿಕೊಳ್ಳಲಾಗಿದೆ ಎಂದು ಮುನ್ಸಿಪಲ್ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್‌ನಾಯ್ಕಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಸುಮಾರು 35ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಪೌರಾಡಳಿತ ಸಚಿವ ಈಶ್ವರ ಬಿ.ಖಂಡ್ರೆ ಅವರು ಅಧಿವೇಶನದಲ್ಲಿ ಕೇವಲ 6ಸಾವಿರ ಪೌರಕಾರ್ಮಿಕರನ್ನು ಮಾತ್ರ ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಸಚಿವರು ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿ, ಈಗ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2016ರಲ್ಲಿ ಮಲ್ಲೇಶ್ವರಂ ಆಟದ ಮೈದಾನ ಹಾಗೂ ಅರಮನೆ ಮೈದಾನದ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ, ಈಗ ರಾಜ್ಯ ಸರಕಾರ ತನ್ನ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ 'ಬೆಳಗಾವಿ ಚಲೋ' ಮಾಡಿ ಸರಕಾರದ ನಿರ್ಧಾರವನ್ನು ಖಂಡಿಸುವುದಾಗಿ ಅವರು ಹೇಳಿದ್ದಾರೆ.







