ಆದಿತ್ಯನಾಥ್ ರ‍್ಯಾಲಿಯಲ್ಲಿ ಮಹಿಳೆಯ ಬುರ್ಖಾ ತೆಗೆಸಿದ ಘಟನೆ: ತನಿಖೆಗೆ ಆದೇಶ

ಬಲ್ಲಿಯಾ, ನ. 22: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರ‍್ಯಾಲಿ ಸಂದರ್ಭ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ತೆಗೆಯುವಂತೆ ಮಹಿಳೆಗೆ ಬಲವಂತ ಮಾಡಿದ ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ರ್ಯಾಲಿಯಲ್ಲಿ ಕಾಣಿಸಿ ಕೊಳ್ಳುವ ನಿಮಿಷಗಳಿಗಿಂತ ಮುನ್ನ ಮಹಿಳೆಯ ಬುರ್ಖಾವನ್ನು ಬಲವಂತವಾಗಿ ತೆಗೆಸಿರುವ ವೀಡಿಯೊ ನಿನ್ನೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ಮುಸ್ಲಿಂ ಮಹಿಳೆ ಸಾಯಿರಾ ಅವರಲ್ಲಿ ಬುರ್ಖಾ ತೆಗೆಯುವಂತೆ ಮಹಿಳಾ ಕಾನ್‌ಸ್ಟೇಬಲ್ ಓರ್ವರು ಬಲವಂತ ಮಾಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಸಾಯಿರಾ ಬಿಜೆಪಿ ಕಾರ್ಯಕರ್ತೆ. ಅವರು ತಮ್ಮ ಗ್ರಾಮದಿಂದ ಸಾಂಪ್ರದಾಯಿಕ ಉಡುಗೆಯಾದ ಬುರ್ಖಾ ಧರಿಸಿ ರ‍್ಯಾಲಿಗೆ ಬಂದಿದ್ದರು. ರ್ಯಾಲಿಯಲ್ಲಿ ಕಪ್ಪು ಬಾವುಟ ತೋರಿಸಬಾರದು ಎಂದು ನಮಗೆ ಸೂಚನೆ ನೀಡಲಾಗಿತ್ತು. ಆದುದರಿಂದ ನಾವು ಮಹಿಳೆಗೆ ಬುರ್ಖಾ ತೆಗೆಯುವಂತೆ ಹೇಳಿದೆವು ಎಂದು ಮಹಿಳಾ ಕಾನ್‌ಸ್ಟೆಬಲ್ ಹೇಳಿದ್ದಾರೆ.
ವೀಡಿಯೊ ದೃಶ್ಯಾವಳಿ ನಮಗೆ ದೊರಕಿದೆ. ಇದಕ್ಕೆ ಸಂಬಂಧಿಸಿದ ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಹೇಳಿದ್ದಾರೆ.





