ಶಾಲಾ ವಿದ್ಯಾರ್ಥಿಗಳು ವಿಹಿಂಪದ ವೈಭವ ಪ್ರದರ್ಶಿನಿ ಮಳಿಗೆ ವೀಕ್ಷಿಸಿ ಎಂದ ಶಿಕ್ಷಣ ಇಲಾಖೆ
ವಿವಾದದ ನಂತರ ಸುತ್ತೋಲೆ ಹಿಂದಕ್ಕೆ

ಉಡುಪಿ, ನ. 22: ವಿಶ್ವ ಹಿಂದೂ ಪರಿಷತ್ ವತಿಯಿಂದ ಉಡುಪಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಧರ್ಮ ಸಂಸದ್ ಕಾರ್ಯಕ್ರಮದ ಹಿಂದೂ ವೈಭವ ಪ್ರದರ್ಶಿನಿ ಮಳಿಗೆಗಳನ್ನು ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ವೀಕ್ಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೊರಡಿಸಿರುವ ಸುತ್ತೋಲೆಯು ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಇಲಾಖೆಯು ಈ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.
ನ.15ರಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಿಲ್ಲೆಯ ಎಲ್ಲ ಶಾಲೆಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ‘ಧರ್ಮ ಸಂಸದ್ ಹಿಂದೂ ವೈಭವ ಪ್ರದರ್ಶಿನಿಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ನಮ್ಮ ಪರಂಪರೆ, ಪ್ರಾಚೀನತೆಯಿಂದ ಇಂದಿನವರೆಗೆ ನಮ್ಮ ಸಂಸ್ಕೃತಿ ನಡೆದು ಬಂದ ದಾರಿ ಹಾಗೂ ನಮ್ಮ ರಾಷ್ಟ್ರದ ವೈಭವವನ್ನು ತಿಳಿಸಿಕೊಡುವ ನೂರಕ್ಕೂ ಅಧಿಕ ಪ್ರದರ್ಶಿನಿ ಸ್ಟಾಲ್ ಗಳನ್ನು ಅಳವಡಿಸಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ಆದುದರಿಂದ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರದರ್ಶಿನಿ ವೀಕ್ಷಣೆಗೆ ಅನುವು ಮಾಡಿಕೊಡಬೇಕು’ ಎಂದು ತಿಳಿಸಲಾಗಿತ್ತು.
ಈ ಕುರಿತು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದು, ಅದರಂತೆ ಇಲಾಖೆ ಉಪನಿರ್ದೇಶಕರು ಈ ಸುತ್ತೋಲೆಯನ್ನು ಹೊರಡಿಸಿದ್ದರು. ಆದರೆ ಇದೀಗ ಇದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಈ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡು ವಿವಾದಕ್ಕೆ ತೆರೆ ಎಳೆದಿದೆ.
‘ವಸ್ತು ಪ್ರದರ್ಶನ ಎಂಬ ಕಾರಣಕ್ಕೆ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಆದರೆ ಇದು ಒಂದು ಸಂಘಟನೆ, ಪಕ್ಷಕ್ಕೆ ಸೀಮಿತ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ ಶಾಲೆಗಳಿಗೆ ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಪತ್ರಿಕೆಗೆ ತಿಳಿಸಿದ್ದಾರೆ.
ಸಿಎಫ್‌ಐ ಖಂಡನೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಈ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.







