ಉಡುಪಿ: 12ನೆ ಧರ್ಮಸಂಸದ್‌ಗೆ ಸಿದ್ಧತೆಗಳು ಪೂರ್ಣ - ಪ್ರೊ.ಎಂ.ಬಿ.ಪುರಾಣಿಕ್
ಧರ್ಮಸಂಸದ್‌ಗೆ ಸಜ್ಜುಗೊಳ್ಳುತ್ತಿದೆ ರಾಯಲ್ ಗಾರ್ಡನ್ಸ್

ಉಡುಪಿ, ನ.22: ವಿಶ್ವ ಹಿಂದೂ ಪರಿಷತ್ ಹಾಗೂ ಧರ್ಮ ಸಂಸದ್ ಸ್ವಾಗತ ಸಮಿತಿಯ ವತಿಯಿಂದ ಉಡುಪಿಯಲ್ಲಿ ಎರಡನೇ ಬಾರಿಗೆ ನ. 24ರಿಂದ 26 ರವರೆಗೆ ನಡೆಯುವ 12ನೆ ಧರ್ಮ ಸಂಸದ್‌ನ ಯಶಸ್ಸಿ ಸಂಘಟನೆಗಾಗಿ ಎಲ್ಲಾ ಪೂರ್ವಸಿದ್ಧತೆಗಳು ಮುಗಿದಿದ್ದು, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಇಂದು ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.
ಧರ್ಮ ಸಂಸದ್ ನಡೆಯುವ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ಸ್‌ನ ಧರ್ಮ ಸಂಸದ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಡಾ.ಹೆಗ್ಗಡೆ ಅವರು ಸಭಾಂಗಣ, ವೇದಿಕೆಯ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು ಎಂದರು.
ದೇಶದ 2000ಕ್ಕೂ ಅಧಿಕ ಸಂತರು ಈ ಧರ್ಮಸಂಸದ್‌ನಲ್ಲಿ ಭಾಗವಹಿಸಲಿದ್ದು, ಇವರಲ್ಲಿ 20ಕ್ಕೂ ಅಧಿಕ ಮಂದಿ ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ. ಹೆಚ್ಚಿನವರು ವಿಮಾನ, ರೈಲು ಹಾಗೂ ಬಸ್‌ಗಳ ಮೂಲಕ ನಗರವನ್ನು ತಲುಪಲಿದ್ದಾರೆ ಎಂದು ಪುರಾಣಿಕ್ ವಿವರಿಸಿದರು.
ಧರ್ಮ ಸಂಸದ್‌ನಲ್ಲಿ ಸ್ವಯಂಸೇವಕರಾಗಿ ದುಡಿಯಲು ರಾಜ್ಯದ ವಿವಿದೆಡೆ ಗಳಿಂದ 500ಕ್ಕಿಂತಲೂ ಅಧಿಕ ಮಂದಿ ಪ್ರಬಂಧಕರು ಈಗಾಗಲೇ ಉಡುಪಿಗೆ ಆಗಮಿಸಿದ್ದು, ಇವರಿಗೆ 80 ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. ಬಜರಂಗ ದಳದ ಕಾರ್ಯಕರ್ತರನ್ನು ರಾತ್ರಿ ವೇಳೆ ನಗರ ಅಲಂಕಾರವನ್ನು ಮಾಡುತಿದ್ದಾರೆ. ಆಗಮಿಸಿದ ಸಂತರಿಗೆ ಮಠ, ಛತ್ರ, ದೇವಸ್ಥಾನ, ಸಭಾಂಗಣ ಹಾಗೂ ಸ್ವಯಂಸೇವಕರ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ನ.24ರ ಶುಕ್ರವಾರ ಬೆಳಗ್ಗೆ ಕೃಷ್ಣಮಠದಿಂದ ಸಂತರ ಮೆರವಣಿಗೆ ನಡೆಯಲಿದ್ದು, ಅತಿಥಿಗಳು ಸೇರಿದಂತೆ ಎಲ್ಲರೂ ಮೆರವಣಿಯಲ್ಲಿ ಅಧಿವೇಶನ ನಡೆಯುವ ರಾಯಲ್ ಗಾರ್ಡನ್‌ಗೆ ಆಗಮಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಧರ್ಮ ಸಂಸದ್ ಉದ್ಘಾಟನೆಗೊಳ್ಳಲಿದೆ. ಸಮಾವೇಶದ ಸಭಾಮಂಟಪಕ್ಕೆ ಸಮಾಜದಲ್ಲಿ ಸಾಮರಸಯಕ್ಕೆ ನಾಂದಿ ಹಾಡಿದ ನಾರಾಯಣಗುರುಗಳ ಹೆಸರನ್ನಿಟ್ಟರೆ, ವೇದಿಕೆಗೆ ಉಡುಪಿಯಲ್ಲೇ ನಡೆದ 1969ರ ವಿಎಚ್‌ಪಿ ಸಮಾವೇಶದಲ್ಲಿ ದುಡಿದ ಭರಣಯ್ಯರ ಹೆಸರನ್ನು ಇಡಲಾಗಿದೆ ಎಂದರು.
ಸಮಾವೇಶವನ್ನು ಬೆಳಗ್ಗೆ 10ಗಂಟೆಗೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ಹಾಗೂ ಬಾಳೆಹೊನ್ನೂರು ರಂಭಾಪುರಿ ಮಠದ ಶ್ರೀಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಉದ್ಘಾಟಿಸುವರು.
ಶ್ರೀ ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಸ್ಮರಣ ಸಂಚಿಕೆ ‘ಪಾಥೇಯ’ ಲೋಕಾರ್ಪಣೆಗೊಳಿಸುವರು. ರಾಷ್ಟ್ರೀಯ ಸ್ವರಸಂಘಚಾಲಕರಾದ ಮೋಹನ್ ಭಾಗವತ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮೊದಲ ದಿನ ಅಪರಾಹ್ನ 3:30ರಿಂದ ಸಂತರು ಮಾತ್ರ ಪಾಲ್ಗೊಳ್ಳುವ ಸಭಾ ಗೋಷ್ಠಿ ನಡೆಯಲಿದ್ದು, ಇದರಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರದ ನಿರ್ಮಾಣಕ್ಕೆ ದಾರಿ, ಗೋಸಂರಕ್ಷಣೆ ಹಾಗೂ ಗೋಸಂವರ್ಧನೆಯ ಕುರಿತು ಚರ್ಚೆ ನಡೆದು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು. ಎರಡನೇ ದಿನದಂದು ಸಂತರುಗಳ ವಿವಿಧ ಗುಂಪುಗಳು ಸಾಮಾಜಿಕ ಸಾಮರಸ್ಯ ನಿರ್ಮಾಣ, ಮತಾಂತರ ತಡೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ವಿಚಾರ ಅಲ್ಲದೇ ಸಂಸ್ಕೃತಿಯ ರಕ್ಷಣೆಗೆ ಯೋಜನೆಗಳ ಕುರಿತೂ ಚರ್ಚೆ ನಡೆಯಲಿದೆ. ಕೊನೆಯ ದಿನವಾದ ನ.26ರಂದು ಬೆಳಗ್ಗೆ ಹಿಂದೂ ಸಮಾಜದ ಮುಖಂಡರು ಹಾಗೂ ಜಾತಿ ಪ್ರಮುಖರ ಸಮಾವೇಶ ರಾಜಾಂಗಣದಲ್ಲಿ ನಡೆಯಲಿದೆ. ಅಲ್ಲಿ ಧರ್ಮಸಂಸದ್ ಸ್ವೀಕರಿಸಿದ ನಿರ್ಣಯಗಳ ಪರಾಮರ್ಶೆ ನಡೆದು ಕಾರ್ಯತಂತ್ರಗಳ ಬಗ್ಗೆ ನಿರ್ಧರಿಸಲಾಗುವುದು ಎಂದರು.
ರವಿವಾರ ಸಂಜೆ 4 ಗಂಟೆಗೆ ಬೃಹತ್ ಹಿಂದೂ ಸಮಾಜೋತ್ಸವ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹಿಂದೂ ಸಮಾಜೋತ್ಸವಕ್ಕೆ ಪೂರ್ವಭಾವಿಯಾಗಿ ಅಪರಾಹ್ನ 2:30ಕ್ಕೆ ಜೋಡುಕಟ್ಟೆಯಿಂದ ಬೃಹತ್ ಶೋಭಾಯಾತ್ರೆ ಸಂತರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಹಿಂದೂ ಸಮಾಜೋತ್ಸವದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಗೋರಕ್ಷ ಪೀಠದ ಪೀಠಾಧ್ಯಕ್ಷರಾದ ಆದಿತ್ಯನಾಥ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ವಿಎಚ್‌ಪಿ ನಾಯಕ ಡಾ.ಪ್ರವೀಣ್‌ಭಾಯ್ ತೊಗಾಡಿಯಾ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಕೇಂದ್ರ ಸಚಿವರಾದ ಉಮಾಭಾರತಿ, ರಾಜನಾಥ ಸಿಂಗ್, ಸೇರಿದಂತೆ ದೇಶದ ಪ್ರಮುಖ ಮಠಾಧಿಪತಿಗಳು, ಪೀಠಾಧಿಪತಿಗಳು, ಸಂತರು, ಸಾಧುಗಳು ಪಾಲ್ಗೊಳ್ಳುವರು ಎಂದವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಶಾಲ್ ನಾಯಕ್, ಭಜರಂಗ ದಳದ ಶರಣ್ ಪಂಪ್‌ವೆಲ್ ಹಾಗೂ ಸುನಿಲ್ ಕೆ.ಆರ್. ಉಪಸ್ಥಿತರಿದ್ದರು.







