ಮಾರ್ಗಸೂಚಿಗಳ ಪಾಲನೆ ಕುರಿತು ಮಾಹಿತಿ ನೀಡಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಶಿವಾನಂದ ವೃತ್ತದ ಬಳಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ
ಬೆಂಗಳೂರು, ನ.22: ಶಿವಾನಂದ ವೃತ್ತದಲ್ಲಿನ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಗಳ ಪಾಲನೆ ಆಗಿರುವ ಕುರಿತು ಮಾಹಿತಿ ನೀಡಲು ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ಶಿವಾನಂದ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಸ್ಟೀಲ್ ಬ್ರಿಡ್ಜ್‌ಗೆ ತಡೆ ಕೋರಿ ಬಿ.ಪಿ.ಮಹೇಶ್ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಶಿವಾನಂದ ವೃತ್ತದಲ್ಲಿ ಸ್ಟೀಲ್ ಬ್ರಿಡ್ಜ್‌ನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಶಿವಾನಂದ ವೃತ್ತದಲ್ಲಿನ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಗಳ ಪಾಲನೆ ಆಗಿರುವ ಕುರಿತು ಮಾಹಿತಿ ನೀಡಲು ಬಿಬಿಎಂಪಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.







