ಕೃಷಿ ಭಾಗ್ಯ ಯೋಜನೆಯಡಿ 122 ಹೊಂಡಗಳ ನಿರ್ಮಾಣ
ಮಂಗಳೂರು, ನ.22: ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 122 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರ ಪ್ರಶ್ನೆಗೆ ಅವರು ಉತ್ತರಿಸಿದರು.
ರೈತ ಸಂಪರ್ಕ ಕೇಂದ್ರದಿಂದ ಅರ್ಜಿಗಳನ್ನು ರೈತರಿಗೆ ವಿತರಿಸಲಾಗುತ್ತದೆ. ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರಿಂದ ಅರ್ಜಿ ಸ್ವೀಕೃತಗೊಂಡ ನಂತರ ರೈತರ ಕ್ಷೇತ್ರಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ಕೈಗೊಂಡು ಪರಿಶೀಲನೆಯಲ್ಲಿ ಜಲಾನಯನ ಪ್ರದೇಶವನ್ನು ಪರಿಗಣಿಸಿ ರೈತರಿಗೆ ಕಾರ್ಯಾದೇಶ ನೀಡಲಾಗುತ್ತದೆ.ಅರ್ಜಿ ಸಲ್ಲಿಸಿದ ಎಲ್ಲ ಆಸಕ್ತ ರೈತರಿಗೂ ಯೋಜನೆಯ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ನುಡಿದರು.
ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರು ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಆಯ್ಕೆಯಾದ ಸಾಮಾನ್ಯ ವರ್ಗದ ಹಾಗೂ ಎಲ್ಲ ಪ.ಜಾ/ಪ.ಪಂಗಡ ವರ್ಗದ ರೈತರಿಗೆ ಕ್ರಮವಾಗಿ ಶೇ.80 ಹಾಗೂ ಶೇ.90ರಷ್ಟು ಸಹಾಯಧನ ನೀಡಲಾಗುತ್ತದೆ ಎಂದು ಐವನ್ ಡಿಸೋಜರ ಪ್ರಶ್ನೆಗೆ ಸಚಿವರು ಉತ್ತರಿಸಿದರು.





