ಉಳ್ಳಾಲ ಕಡಲ ಕಿನಾರೆಗೆ ಹರಿದು ಬಂತು ಬೂತಾಯಿ ರಾಶಿ !

ಮಂಗಳೂರು, ನ.22: ಕಡಲ ಅಲೆಗಳ ಏರಿಳಿತವು ಅದೆಂತಹ ಅದ್ಭುತ ಶಕ್ತಿಯನ್ನು ಹೊಂದಿರುತ್ತದೆ ಎಂದರೆ, ಕಡಲ ನಡುವೆ ಗುಂಪಿನಲ್ಲಿ ಸಾಗುತ್ತಿರುವ ಮೀನುಗಳ ರಾಶಿಯನ್ನೂ ಅದು ಕೆಲವೊಮ್ಮೆ ಅದು ಕಡಲ ಕಿನಾರೆಯತ್ತ ನೂಕಬಲ್ಲವು !
ಅಂತಹ ಒಂದು ವಿದ್ಯಮಾನ ಉಳ್ಳಾಲದ ಕಡಲ ಕಿನಾರೆಯಲ್ಲಿ ಇಂದು ಸಂಭವಿಸಿದೆ. ಉಳ್ಳಾಲ ಕಡಲಕಿನಾರೆಯ ಬಳಿ ಇಂದು ಬೆಳಗ್ಗಿನ ವೇಳೆ ಜೀವಂತ ಬೂತಾಯಿ ಮೀನು (ಸಾರ್ಡಿನ್)ಗಳು ರಾಶಿ ರಾಶಿಯಾಗಿ ಕಂಡುಬಂದವು. ಸಾವಿರಾರು ಸಂಖ್ಯೆಯಲ್ಲಿ ನೀರಿನ ಅಲೆಗಳೊಂದಿಗೆ ತೇಲುತ್ತಾ ಬಂದ ಮೀನುಗಳು ಸ್ಥಳೀಯರು ಹಾಗೂ ಅಲ್ಲಿ ವಿಹಾರಕ್ಕೆ ಬಂದಿದ್ದವರೂ ಮೀನುಗಳನ್ನು ಹಿಡಿದು ಸಾಗಿಸಿದ ಪ್ರಸಂಗ ನಡೆದಿದೆ.
ಈ ರೀತಿ ಮೀನುಗಳು ದಡ ಸೇರುವ ಸಂಗತಿ ಅದರಲ್ಲೂ ಬೂತಾಯಿ ಮೀನುಗಳು ಕಡಲ ನೀರಿನ ಅಲೆಗಳೊಂದಿಗೆ ತೇಲುತ್ತಾ ದಡ ಸೇರುತ್ತವೆ. ಹೀಗೆ ದಡ ಸೇರುವ ಮೀನುಗಳಲ್ಲಿ ಕೆಲವು ಮತ್ತೆ ಅಲೆಗಳೊಂದಿಗೆ ಮತ್ತೆ ಸಮುದ್ರದ ಮಡಿಲನ್ನು ಸೇರುವ ಪ್ರಸಂಗವೂ ಕಡಲ ಕಿನಾರೆಯಲ್ಲಿ ನಡೆಯುತ್ತಿರುತ್ತವೆ. ಬೂತಾಯಿ ಮೀನುಗಳು ನೀರಿನಲ್ಲಿ ಗುಂಪಾಗಿ ಸಾಗುತ್ತವೆ. ಈ ರೀತಿ ಸಾಗುವ ವೇಳೆ ದಾರಿ ತಪ್ಪಿ ಕಡಲಿನಂಚಿಗೆ ಬರುವುದು ಸಾಮಾನ್ಯ ಎ್ನುವುದು ಮೀನುಗಾರರ ಅಭಿಪ್ರಾಯ.
ಬೂತಾಯಿ ರಾಶಿಗಿದೆ ಬಲೆಗಳನ್ನೂ ಕೆಡಹುವ ಶಕ್ತಿ!
‘‘ಬೂತಾಯಿ ಮೀನುಗಳು ರಾಶಿ ರಾಶಿಯಾಗಿ ಗುಂಪಿನಲ್ಲಿ ಇರುವ ಜೀವಿ. ಕಡಲಿನಲ್ಲಿ ಮೀನುಗಾರರು ಬಲೆ ಹಾಕುವ ಸಂದರ್ಭವೂ ಈ ಮೀನುಗಳು ಭಾರೀ ರಾಶಿಯಲ್ಲಿದ್ದರೆ ಬಲೆಗಳನ್ನು ಕೆಡಹಿ ಹಾಕುವ ಶಕ್ತಿಯೂ ಬೂತಾಯಿ ಮೀನುಗಳಿರುತ್ತವೆ. ತುಂಬಾ ಚುರುಕಾದ ಹಾಗೂ ನೀರಿನಲ್ಲಿ ಅತ್ಯಂತ ವೇಗವಾಗಿ ಗುಂಪಿನಲ್ಲಿ ಚಲಿಸುವ ಮೀನುಗಳಲ್ಲಿ ಒಂದು ಬೂತಾಯಿ. ಹಾಗಾಗಿ ಒಟ್ಟಾಗಿ ಚಲಿಸುವ ವೇಳೆ ಸಮುದ್ರ ಅಲೆಗಳಿಗೆ ಸಿಕ್ಕು ದಡವೆಂದರಿಯದೆ ಕಿನಾರೆ ಸೇರುವ ಘಟನೆಗಳು ನಡೆಯುತ್ತಿರುತ್ತವೆ’’ ಎಂದು ಉಳ್ಳಾಲ ಮೊಗವೀರ ಪಟ್ಣದ ಮೀನುಗಾರರಾದ ಜಯನ್ ಉಳ್ಳಾಲ ಅಭಿಪ್ರಾಯಿಸಿದ್ದಾರೆ.
ಇಂದು ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ಬೂತಾಯಿ ಮೀನುಗಳು ದಡ ಸೇರಿವೆ. ಬಹಳಷ್ಟು ಮಂದಿ ನೂರಾರು ಸಂಖ್ಯೆಯಲ್ಲಿ ದಡ ಸೇರಿದ ಮೀನುಗಳನ್ನು ಕೊಂಡೊಯ್ದಿದ್ದಾರೆ. ನಮ್ಮ ಮನೆಯವರಿಗೂ ಕೆಲ ಮೀನುಗಳು ಸಿಕ್ಕಿವೆ ಎಂದು ಜಯನ್ ತಿಳಿಸಿದ್ದಾರೆ.
‘‘ಈ ರೀತಿ ಮೀನುಗಳು ದಡ ಸೇರುವುದು ಯಾವುದೇ ರೀತಿಯ ಅಪಾಯದ ಸೂಚನೆಯಾಗಲಿ, ಶುಭ ಸಂಕೇತ ಎಂಬ ನಂಬಿಕೆಯೂ ಮೀನುಗಾರರಲ್ಲಿ ಇಲ್ಲ. ಇದು ಪ್ರಕೃತಿ ಸಹಜವಾದ ಪ್ರಕ್ರಿಯೆ ಅಷ್ಟೆ. ಇದರಿಂದ ಇಂದು ಕೆಲವರು ತಾಜಾ ಬೂತಾಯಿ ಮೀನುಗಳನ್ನು ಮನೆಗೆ ಒಯ್ಯುವಂತಾಗಿೆ’’ ಎಂದು ಜಯನ್ ಪ್ರತಿಕ್ರಿಯಿಸಿದ್ದಾರೆ.







