ಗೋ.ಮಧುಸೂಧನ್ ರನ್ನು ಬಂಧಿಸದಿದ್ದರೆ ಉಗ್ರಹೋರಾಟ: ಜ್ಞಾನಪ್ರಕಾಶ್ ಸ್ವಾಮೀಜಿ ಎಚ್ಚರಿಕೆ
ಮೈಸೂರು ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಮೈಸೂರು, ನ.22: ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದ ರಾಷ್ಟ್ರದ್ರೋಹಿ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳು, ಪ್ರಗತಿಪರ ಸ್ವಾಮೀಜಿಗಳು, ಸೂಫಿ ಸಂತರು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಕರೆ ನೀಡಿದ್ದ ಬಂದ್‍ಗೆ ನಗರದಲ್ಲಿ ಮಿಶ್ರಪ್ರತಿಕ್ರಿಯೆ ದೊರೆತಿದೆ.
ಗೋ.ಮಧುಸೂಧನ್ ವಿರುದ್ಧ ಎಫ್ ಐಆರ್ ದಾಖಲಿಸದಿರುವುದು, ಕಳೆದ ಹತ್ತು ದಿನಗಳಿಂದ ಕೃಷ್ಣರಾಜ ಪೊಲೀಸ್ ಠಾಣೆ ಎದುರು ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿವಿಧೆಡೆ ಬುಧವಾರ ಬೆಳಗ್ಗೆಯಿಂದಲೇ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ದಲಿತ ವೆಲ್‍ಫೇರ್ ಟ್ರಸ್ಟ್, ಪ್ರಗತಿಪರ ಒಕ್ಕೂಟ, ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಸೇರಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಮಾಲಕರಲ್ಲಿ ಮನವಿ ಮಾಡಿದರು.
ಈ ವೇಳೆ ನಗರದ ಪ್ರಮುಖ ಸ್ಥಳಗಳಾದ ಡಿ.ದೇವರಾಜ ಅರಸು ರಸ್ತೆ, ನೂರಡಿ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ, ಸಾಡೇ ರಸ್ತೆ, ಇರ್ವಿನ್ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.
ಜನರ ಸಂಚಾರಕ್ಕೆ ಯಾವುದೇ ಅಡ್ಡಿಪಡಿಸದಂತೆ ಪೊಲೀಸ್ ಕಮೀಷನರ್ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಬಸ್‍ಗಳು ಎಂದಿನಂತೆ ಸಂಚರಿಸಿದವು. ಹಾಗೂ ಪ್ರತಿಭಟನಾಕಾರರು ಬೆಳ್ಳಂಬೆಳಗೆ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಂಚಾಲಕ ಎನ್.ಭಾಸ್ಕರ್, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ ಮತ್ತು ಎಡೆದೊರೆ ಮಹದೇವಯ್ಯ ಸೇರಿದಂತೆ ಹಲವರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ಬಸ್‍ಗಳನ್ನು ಸಂಚರಿಸದಿರುವಂತೆ ಅಲ್ಲಿನ ಸಿಬ್ಬಂದಿಗಳಿಗೆ ಮನವಿ ಮಾಡಿಕೊಂಡರು.
ವಿವಿಧೆಡೆಗಳಿಂದ ಯುವಕರು ಬೈಕ್‍ಗಳಲ್ಲಿ ತಂಡೋಪ ತಂಡವಾಗಿ ಪುರಭವನದ ಮುಂಭಾಗಕ್ಕೆ ಆಗಮಿಸಿ ಸಮಾವೇಶಗೊಂಡರು. ಬಳಿಕ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ತೆರಳಿದರು.
ಈ ಸಂದರ್ಭದಲ್ಲಿ ಗೋ.ಮಧುಸೂಧನ್ ನನ್ನು ರಕ್ಷಿಸುತ್ತಿರುವ ಸರಕಾರ ಪೊಲೀಸ್ ಇಲಾಖೆ, ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಫ್ಲೈವುಡ್ ಶೀಟ್‍ನಲ್ಲಿ ಚಿತ್ರಿಸಲಾಗಿದ್ದ ಗೋ.ಮಧುಸೂಧನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ವಿರುದ್ಧ ಆಕ್ರೋಶ: ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುವ ವೇಳೆ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನಾಕಾರರು ಬಲ್ಲಾಳ್ ವೃತ್ತದಲ್ಲಿರುವ ಬೌದ್ಧ ಸ್ಥೂಪಕ್ಕೆ ತೆರಳಲು ಮುಂದಾದರು. ಅದಕ್ಕೆ ಅವಕಾಶಕೊಡದ ಪೊಲೀಸರು ಅವರನ್ನು ತಡೆದರು. ಆ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಬಸವಲಿಂಗಾ ಸ್ವಾಮಿಗಳನ್ನು ಪೊಲೀಸರು ಎಳೆದಾಡಿದಾಗ ಪ್ರತಿಭಟನಾಕಾರರು ಉದ್ರಿಕ್ತರಾದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆದ ಸಮಾವೇಶದಲ್ಲಿ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಸಂವಿಧಾನಕ್ಕೆ ಆದ ಅವಮಾನ ಈ ದೇಶಕ್ಕೆ ಆದ ಅವಮಾನ. ದೇಶದಲ್ಲಿ ಮನು ಸಂವಿಧಾನ ಜಾರಿ ಮಾಡುವ ಹುನ್ನಾರ ನಡೆಯುತ್ತಿದ್ದು, ಮನು ಸಂವಿಧಾನವು ಸಮಸ್ತ ಭಾರತೀಯರನ್ನು ಜಾತಿ ಧರ್ಮದ ಹೆಸರಿನಲ್ಲಿ ಹೊಡೆದು ಭಾರತದ ಅಖಂಡತೆಗೆ ಅಪಾಯ ತರುತ್ತಿದೆ. ಸಂವಿಧಾನವನ್ನು ಉಳಿಸಿಕೊಳ್ಳುವ ಸಲುವಾಗಿ ಇಂತಹ ಮನುವಾದಿ ರಾಷ್ಟ್ರದ್ರೋಹಿಗಳನ್ನು ಕೂಡಲೇ ಬಂಧಿಸಿಬೇಕು ಎಂದು ಆಗ್ರಹಿಸಿದರು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ವಿವಿಧ ಸಂಘಟನೆಗಳೊಗೂಡಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುಮಾರ ಒಂದು ಗಂಟೆಗೂ ಹೆಚ್ಚು ಸಮಯ ಕಾದರು ಜಿಲ್ಲಾಧಿಕಾರಿಗಳು ತಮ್ಮ ಅಹವಾಲು ಸ್ವೀಕರಿಸಲು ಬರದಿದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಹುಣಸೂರು ಮೈಸೂರು ರಸ್ತೆಗೆ ತೆರಳಿ ರಸ್ತೆ ಮಧ್ಯ ಕುಳಿತು ಧಿಕ್ಕಾರ ಕೂಗಿ ತಮ್ಮ ಅಸಮಧಾನ ವ್ಯಕ್ತಡಪಸಿದರು. ಇದರಿಂದ ಸ್ವಲ್ಪ ಗಲಿಬಿಲಿಗೊಂಡ ಪೊಲೀಸರು ತಕ್ಷಣ ಜಿಲ್ಲಾಧಿಕಾರಿಯನ್ನು ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಬಂದರು.
ಸಂವಿಧಾನವನ್ನು ನಿಂದಿಸಿ ಅಪಮಾನ ಮಾಡಿರುವ ಗೋ.ಮಧುಸೂಧನ್ ವಿರುದ್ಧ ಪ್ರಕರಣ ದಾಖಲಿಸಿ, ಸಂವಿಧಾನದತ್ತವಾಗಿ ಪಡೆದುಕೊಂಡಿರುವ ಸವಲತ್ತುಗಳು ಹಾಗೂ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು, ಭಾರತದ ಪೌರತ್ವವನ್ನು ರದ್ದುಗೊಳಿಸಿ, ಭಾರತದಿಂದ ಗಡಿಪಾರು ಮಾಡಬೇಕು. ಗೋ.ಮಧುಸೂಧನ್ ವಿರುದ್ಧ ದೂರು ಸಲ್ಲಿಸಿದ್ದರೂ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯವಹಿಸಿರುವ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ನಿಮ್ಮ ಮನವಿಯನ್ನು ಸ್ವೀಕರಿಸಿದ್ದು, ನಿಮ್ಮ ಬೇಡಿಕೆಯನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಗೋ.ಮಧುಸೂಧನ್ ಬಂಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸಂಚಾಲಕ ಎನ್.ಭಾಸ್ಕರ್, ಎಸ್ ಡಿಪಿಐ ರಾಜ್ಯ ಪ್ರಧಾನಕಾರ್ಯದರ್ಶಿ ಅಬ್ದುಲ್ ಮಜೀದ್, ದಲಿತ ವೆಲ್‍ಫೇರ್‍ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಪ್ರಗತಿಪರ ಚಿಂತಕ ಸಾಹಿತಿ ಭಗವಾನ್, ದಲಿತ ಸಂಘಟನೆಯ ಹರಿಹರ ಆನಂದಸ್ವಾಮಿ, ಚೋರನಹಳ್ಳಿ ಶಿವಣ್ಣ, ಎಡೆದೊರೆ ಮಹದೇವಯ್ಯ, ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಬೊಕ್ಕಳ್ಳಿ ನಂಜುಂಡಸ್ವಾಮಿ, ಭವಾನಿ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಎನ್.ಎಸ್.ಯೋಗೀಶ್, ಚಲವಾದಿ ಮಹಾಸಭಾದ ಜಗದೀಶ್, ದೇವರಾಜು, ಅಶೋಕಪುರಂ ರೇವಣ್ಣ ಅಂಬೇಡ್ಕರ್ ಕ್ರಾಂತಿ ದಳದ ಡಾ.ಆರ್.ರಾಜು, ವಿಶ್ವೇಶ್ವರಯ್ಯ, ಅಸ್ಲಂ ಪಾಷ, ಅಯೂಬ್ ಖಾನ್, ರಮೇಶ್, ವಿನೋದ್, ಹರೀಶ್ ಸೇರಿದಂತೆ ಸಾವಿರಾರು ದಲಿತ ಮುಖಂಡರು ಭಾಗವಹಸಿದ್ದರು.
ಸಂವಿಧಾನದನ ಬಗ್ಗೆ ಹಗುರವಾಗಿ ಮಾತನಾಡಿರುವ ಗೋ.ಮಧುಸೂಧನ್‍ನನ್ನು ಬಂಧಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಆತನನ್ನು ರಕ್ಷಣೆ ಮಾಡುತ್ತಿರುವು ಸರ್ಕಾರಕ್ಕೆ ಧಿಕ್ಕಾರವಿರಲಿ.
-ಚೋರನಹಳ್ಳಿ ಶಿವಣ್ಣ, ದಸಂಸ ಮುಖಂಡ
ಗೋ.ಮಧುಸೂಧನ್ ಇಂತಹ ಹೇಳಿಕೆಗಳನ್ನು ಇದೇ ಮೊದಲು ನೀಡುತ್ತಿಲ್ಲ. 2000ರಲ್ಲೂ ಸಂವಿಧಾನ ಪರಾಮರ್ಶೆಯಾಗಬೇಕು ಎಂದು ಹೇಳಿಕೆ ನೀಡಿದ್ದ, ಇಂತಹ ಗೋಮುಖ ವ್ಯಾಘ್ರನನ್ನು ಕೂಡಲೇ ಸರಕಾರ ಬಂಧಿಸಿ ಕ್ರಮ ಜರಗಿಸುವ ಮೂಲಕ ಇತರಿರಗೂ ಎಚ್ಚರಿಕೆಯನ್ನು ನೀಡಬೇಕು.
-ಶಾಂತರಾಜು ಅಧ್ಯಕ್ಷರು, ದಲಿತ ವೆಲ್‍ಫೇರ್ ಟ್ರಸ್ಟ್







