ಪೊಲೀಸರು ಕರಸೇವಕರ ಮೇಲೆ ಗುಂಡು ಹಾರಿಸಿದ್ದು ಸರಿ: ಮುಲಾಯಂ ಸಿಂಗ್ ಯಾದವ್

ಲಕ್ನೊ. ನ.22: 1990ರಲ್ಲಿ ಅಯೋಧ್ಯೆಯತ್ತ ಧಾವಿಸುತ್ತಿದ್ದ ಕರ ಸೇವಕರ ಮೇಲೆ ಗುಂಡು ಹಾರಿಸುವಂತೆ ಪೊಲೀಸರಿಗೆ ತಾನು ನೀಡಿದ ಸೂಚನೆಯನ್ನು ಸಮರ್ಥಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ದೇಶದ ಏಕತೆಗಾಗಿ ಇನ್ನಷ್ಟು ಜನರನ್ನು ಹತ್ಯೆ ಮಾಡಬೇಕಾಗಿದ್ದರೂ ಪೊಲೀಸರು ಸಿದ್ಧವಾಗಿದ್ದರು ಎಂದು ಹೇಳಿದ್ದಾರೆ.
ಪಕ್ಷದ ಮುಖ್ಯ ಕಚೇರಿಯಲ್ಲಿ ತನ್ನ 79ನೇ ಜನ್ಮದಿನಾಚರಣೆಯನ್ನು ವೈಭವಯುತವಾಗಿ ಆಚರಿಸಿಕೊಂಡ ಮುಲಾಯಂ ಆ ಮೂಲಕ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಸಂದೇಶವನ್ನು ರವಾನಿಸಿದರು. 1990ರ ಅಕ್ಟೋಬರ್ 30ರಂದು ನಡೆದ ಈ ಘಟನೆಯಲ್ಲಿ 28 ಮಂದಿ ಹತರಾಗಿದ್ದರು ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಮುಲಾಯಂ ತಿಳಿಸಿದರು.
ವಿಶ್ವಹಿಂದೂ ಪರಿಷತ್ ನೀಡಿದ ಕರೆಯಂತೆ ರಾಮ ಜನ್ಮಭೂಮಿ-ಬಾಬರಿ ಮಸೀದಿಯ ವಿವಾದಿತ ಸ್ಥಳದಲ್ಲಿ ಮಂದಿರವನ್ನು ನಿರ್ಮಿಸಲು ದೇಶಾದ್ಯಂತದಿಂದ ಒಂದು ಲಕ್ಷ ಕರಸೇವಕರು ಅಯೋಧ್ಯೆಗೆ ಬಂದು ಜಮಾಯಿಸಿದ್ದರು. ಫೈರಿಂಗ್‌ಗೆ ಸೂಚನೆ ನೀಡಿದ ಕಾರಣದಿಂದ ಮುಲಾಯಂ ಸಿಂಗ್ ಯಾದವ್‌ಗೆ ಮುಲ್ಲಾ ಮುಲಾಯಂ ಎಂಬ ಅಡ್ಡ ಹೆಸರು ಅಂಟಿಕೊಂಡಿತು. ಬಾಬ್ರಿ ಮಸೀದಿಯನ್ನು ಉಳಿಸುವ ತಮ್ಮ ಪ್ರಯತ್ನವನ್ನು ಸಮರ್ಥಿಸಿದ ಮುಲಾಯಂ, ತಮ್ಮ ಆರಾಧನಾ ಸ್ಥಳವನ್ನೇ ಇಲ್ಲವಾಗಿಸಿದರೆ ದೇಶದಲ್ಲಿ ಇನ್ನೇನು ಉಳಿಯಲು ಸಾಧ್ಯ ಎಂದು ಅನೇಕ ಮುಸ್ಲಿಮರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದರು ಎಂದು ತಿಳಿಸಿದರು.
ಈ ಬಗ್ಗೆ ಅಟಲ್ ಬಿಹಾರಿ ವಾಜಪೇಯಿಯವರ ಜೊತೆ ಚರ್ಚಿಸುತ್ತಿದ್ದಾಗ ಅವರು ಅಯೋಧ್ಯೆಯಲ್ಲಿ ಸತ್ತವರ ಸಂಖ್ಯೆ 56 ಎಂದು ತಿಳಿಸಿದ್ದರು. ನಾನು ಇಲ್ಲ ವಾಸ್ತವದಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ವಾದಿಸಿದೆ. ಆರು ತಿಂಗಳ ನಂತರವಷ್ಟೇ ನನಗೆ ಸತ್ತವರ ಸಂಖ್ಯೆಯ ಬಗ್ಗೆ ತಿಳಿದುಬಂತು ಮತ್ತು ನಾನು ನನ್ನದೇ ರೀತಿಯಲ್ಲಿ ಅವರಿಗೆ ಸಹಾಯ ಮಾಡಿದ್ದೇನೆ ಎಂದು ಮುಲಾಯಂ ನುಡಿದರು.
ಮುಸ್ಲಿಮರು ಈಗಲೂ ಕೂಡಾ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ತಿಳಿಸಿದ ಮುಲಾಯಂ ನಮ್ಮದೇ ಪಕ್ಷದ ಜನರಿಂದ ನಡೆಯುವ ತಪ್ಪಿನಿಂದಾಗಿ ಮುಸಲ್ಮಾನರನ್ನು ಮತಗಟ್ಟೆಗೆ ಕರೆತರಲು ಸಾಧ್ಯವಾಗುತ್ತಿಲ್ಲ. ಅವರು ಈಗಲೂ ನಮ್ಮ ಪಕ್ಕಕ್ಕೇ ಮತಹಾಕುತ್ತಿದ್ದಾರೆ ಎಂದು ಎಸ್‌ಪಿ ಮುಖಂಡ ತಿಳಿಸಿದರು. 403 ವಿಧಾನಸಭಾ ಸ್ಥಾನಗಳ ಪೈಕಿ ಕೇವಲ 47ರಲ್ಲಿ ಜಯಗಳಿಸಲು ಸಾಧ್ಯವಾಗಿರುವುದು ನಾಚಿಕೆಗೇಡು ಎಂದು ಹೇಳಿದ ಮುಲಾಯಂ, ಫೈರಿಂಗ್‌ಗೆ ಸೂಚನೆ ನೀಡಿದ ನಂತರ ಪ್ರತಿಪಕ್ಷಗಳು ನನ್ನನ್ನು ಕೊಲೆಗಡುಕ ಎಂದು ಕರೆದರೂ ಕೂಡಾ 1993ರಲ್ಲಿ ನಮ್ಮ ಪಕ್ಷ ನೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು ಎಂದು ತಿಳಿಸಿದರು.
ಈಗಿನ ಯುವಕರು 1993ರಲ್ಲಿದ್ದ ಯುವಕರಂತಿಲ್ಲ. ಒಬ್ಬ ನಾಯಕನಿಗೆ ಗ್ರಾಮದ ಬೂತ್ ಮಟ್ಟದಲ್ಲೇ ಪಕ್ಷವನ್ನು ಗೆಲ್ಲಿಸಲು ಸಾಧ್ಯವಾಗದಿದ್ದರೆ ಪಕ್ಷದ ಗತಿಯಾದರೂ ಏನು. ನಾನು ಬಲಿಷ್ಠ ಪಕ್ಷವನ್ನು ನೋಡಲು ಬಯಸುತ್ತೇನೆ ಮತ್ತು ನಾಯಕರೂ ಕೂಡಾ ಜನರ ಜೊತೆ ಸಂಪರ್ಕ ಸಾಧಿಸಲು ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕು ಎಂದು ಮುಲಾಯಂ ತಿಳಿಸಿದರು.







