ಪಠ್ಯಪುಸ್ತಕದಲ್ಲಿ ಪದ್ಮಿನಿ ಬಗ್ಗೆ ತಪ್ಪು ಮಾಹಿತಿಯಿದ್ದರೆ ಸರಿಪಡಿಸಲಾಗುವುದು: ಸಚಿವ ರಾಥೋಡ್

ಜೈಪುರ, ನ.22: ರಾಜಸ್ಥಾನದ ಶಾಲಾ ಪಠ್ಯಪುಸ್ತಕಗಳಲ್ಲಿ ಚಿತ್ತೋರ್ ರಾಣಿ ಪದ್ಮಿಣಿ ಬಗ್ಗೆ ತಪ್ಪು ಮಾಹಿತಿಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ರಾಥೋಡ್ ಬುಧವಾರ ತಿಳಿಸಿದ್ದಾರೆ.
ದಿಲ್ಲಿ ಚಕ್ರವರ್ತಿಯಾಗಿದ್ದ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೋರ್ ಮೇಲೆ ದಾಳಿ ಮಾಡಲು ಪದ್ಮಿನಿ ಕೂಡಾ ಕಾರಣವಾಗಿದ್ದಳು. ಪದ್ಮಿನಿಯ ಮುಖವನ್ನು ಕನ್ನಡಿಯಲ್ಲಿ ನೋಡಿದ್ದ ಖಿಲ್ಜಿ ಆಕೆಯ ಸೌಂದರ್ಯಕ್ಕೆ ಮಾರುಹೋಗಿದ್ದ ಮತ್ತು ಆಕೆ ಶ್ರೀಲಂಕಾದ ಗಂಧರ್ವಸೇನಾನ ಮಗಳಾಗಿದ್ದಳು ಎಂದು ರಾಜಸ್ಥಾನ ರಾಜ್ಯ ಶಿಕ್ಷಣ ಮಂಡಳಿಯ 12ನೆ ತರಗತಿ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು.
ಈ ಬಗ್ಗೆ ಸಚಿವರನ್ನು ಕೇಳಿದಾಗ, ಸರಕಾರಿ ಶಾಲಾ ಪುಸ್ತಕಗಳಲ್ಲಿ ತಪ್ಪು ಮಾಹಿತಿಗಳನ್ನು ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ ಖಂಡಿತವಾಗಿಯೂ ಅದನ್ನು ಪರಿಶೀಲಿಸಲಾಗುವುದು ಮತ್ತು ತಪ್ಪುಗಳು ನನ್ನ ಗಮನಕ್ಕೆ ಬಂದಲ್ಲಿ ಅದನ್ನು ಕೂಡಲೇ ಖುದ್ದಾಗಿ ಶಿಕ್ಷಣ ಸಚಿವರಿಗೆ ತಿಳಿಸುತ್ತೇನೆ ಎಂದು ಉತ್ತರಿಸಿದರು.
ಬಿಜೆಪಿ ಸರಕಾರದ ನಾಲ್ಕನೇ ವರ್ಷಾಚರಣೆಯ ಸಮಾರಂಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಐತಿಹಾಸಿಕ ವಿಷಯಗಳನ್ನು ತಿರುಚಬಾರದು ಮತ್ತು ಇತಿಹಾಸಕ್ಕೆ ಸಂಬಂಧಪಡದ ವಿಷಯಗಳನ್ನು ಕಲಿಸಬಾರದು ಎಂದು ಹೇಳಿದರು.
ಪದ್ಮಾವತಿ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪ ಮಾಡಿರುವ ಶ್ರೀ ರಜಪೂತ ಕರ್ಣಿ ಸೇನಾ ಇತರ ಸಂಘಟನೆಗಳ ಬೆಂಬಲದೊಂದಿಗೆ ಚಿತ್ರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯನ್ನು ನಡಸುತ್ತಿದ್ದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆಯೊಡ್ಡಿದೆ. ಚಿತ್ರದಲ್ಲಿ ಬದಲಾವಣೆಗಳನ್ನು ಮಾಡದೆ ಬಿಡುಗಡೆಗೆ ಅನುಮತಿ ನೀಡಬಾರದೆಂದು ಕೋರಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿಗೆ ಪತ್ರವನ್ನೂ ಬರೆದಿದ್ದಾರೆ.
ಸದ್ಯ ಜನರ ಮನಸ್ಸು ಸರಕಾರದ ವಿರುದ್ಧವಾಗಿದೆ ಎಂಬುದನ್ನು ನಿರಾಕರಿಸಿದ ರಾಥೋಡ್ ನಾವು ಮತ್ತೆ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬರಲಿದ್ದೇವೆ. ನಮ್ಮ ಪಕ್ಷ ಲೋಕಸಭೆ, ಪಂಚಾಯತ್ ಮತ್ತು ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಭಾರೀ ಬಹುಮತದಿಂದ ಜಯಗಳಿಸಿದೆ.
ಇದು ನಮ್ಮ ಸರಕಾರದ ಜನಪ್ರಿಯತೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು. ಜೈಪುರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತು ಕೇಳಲಾದ ಪ್ರಶ್ನೆಗೆ, ಜೈಪುರವನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ದ್ರವ್ಯಾವತಿಯಿಂದ ರಿಂಗ್‌ರೋಡ್‌ವರೆಗೆ ಮತ್ತು ಸ್ವಚ್ಛತೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಸರಕಾರದಿಂದಲೇ ಅಭಿವೃದ್ಧಿ ಕಾರ್ಯ ನಡೆದಿದೆ ಎಂದು ಹೇಳಿದರು.







