ನಾಳೆಯಿಂದ ಆ್ಯಶಸ್ ಟೆಸ್ಟ್: ಆಸ್ಟ್ರೇಲಿಯ-ಇಂಗ್ಲೆಂಡ್ ಮುಖಾಮುಖಿ

ಬ್ರಿಸ್ಬೇನ್, ನ.22: ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡಗಳು ಗುರುವಾರ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಮೊದಲ ಟೆಸ್ಟ್ ಪಂದ್ಯ ಇಲ್ಲಿನ ಗಾಬಾ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ಸ್ಟೀವನ್ ಸ್ಮಿತ್ ಹಾಗೂ ಜೋ ರೂಟ್ ಇದೇ ಮೊದಲಬಾರಿ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯ ತಂಡ ನಥಾನ್ ಲಿಯೊನ್ ಈ ಹಿಂದೆ ಸ್ವದೇಶದಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಆಡಿದ ಅನುಭವವಿದೆ. ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ತಂಡಕ್ಕೆ ವಾಪಸಾಗಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಪ್ರಮುಖ ಬೌಲರ್‌ಗಳಾಗಿದ್ದಾರೆ.
ಆಸ್ಟ್ರೇಲಿಯ ಗಾಬಾ ಸ್ಟೇಡಿಯಂನಲ್ಲಿ ಕಳೆದ 29 ವರ್ಷಗಳಿಂದ ಅಜೇಯ ದಾಖಲೆ ಕಾಯ್ದುಕೊಂಡಿದೆ.
ತಂಡದ ಸಮಾಚಾರ: ಆಸ್ಟ್ರೇಲಿಯ ತಂಡ ಆಡುವ 11ರ ಬಳಗದಲ್ಲಿ ಜಾಕ್ಸನ್ ಬರ್ಡ್ ಹಾಗೂ ಚಾಡ್ ಸಾಯೆರ್ಸ್ ರನ್ನು ಹೊರಗಿಡುವ ಸಾಧ್ಯತೆಯಿದೆ. ಬ್ರಿಸ್ಬೇನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಕತ್ತುನೋವು ಕಾಣಿಸಿಕೊಂಡ ಹೊರತಾಗಿಯೂ ಡೇವಿಡ್ ವಾರ್ನರ್ ಮೊದಲ ಪಂದ್ಯಕ್ಕೆ ಲಭ್ಯವಿರುವ ನಿರೀಕ್ಷೆಯಿದೆ. ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಿಕೆಟ್‌ಕೀಪರ್ ಟಿಮ್ ಪೈನ್ 2010ರ ಬಳಿಕ ಮೊದಲ ಟೆಸ್ಟ್ ಆಡಲು ಸಜ್ಜಾಗಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಆಲ್‌ರೌಂಡರ್ ಮೊಯಿನ್ ಅಲಿ ಆರನೆ ಕ್ರಮಾಂಕದಲ್ಲಿ ಆಡಲಿದ್ದಾರೆ. ಜಾಕ್ ಬಾಲ್ ನಾಲ್ಕನೆ ವೇಗದ ಬೌಲರ್ ಆಗಿ ಆಡುವ 11ರ ಬಳಗದಲ್ಲಿ ಆಡಲಿದ್ದಾರೆ.
ಪಿಚ್ ಸ್ಥಿತಿಗತಿ
ಗಾಬಾ ಪಿಚ್ ಸಾಮಾನ್ಯವಾಗಿ ಎರಡು ಹಾಗೂ ಮೂರನೆ ದಿನದಾಟದಲ್ಲಿ ವೇಗ ಹಾಗೂ ಬೌನ್ಸ್ ಗೆ ಹೆಚ್ಚು ನೆರವಾಗಲಿದೆ. ಪಿಚ್‌ನ ಹುಲ್ಲನ್ನು ಕತ್ತರಿಸಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ.
ಹೈಲೈಟ್ಸ್
►ಆಸ್ಟ್ರೇಲಿಯ 1988 ರಿಂದ ಗಾಬಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಇಂಗ್ಲೆಂಡ್ 1986ರ ಬಳಿಕ ಈ ಮೈದಾನದಲ್ಲಿ ಜಯ ಸಾಧಿಸಿಲ್ಲ.
►ಉಭಯ ತಂಡಗಳ ನಡುವೆ ನಡೆದಿರುವ ಕಳೆದ 5 ಸರಣಿಗಳಲ್ಲಿ ಇಂಗ್ಲೆಂಡ್ ತಂಡ ನಾಲ್ಕು ಬಾರಿ ಆ್ಯಶಸ್ ಕಪ್ ಗೆದ್ದುಕೊಂಡಿದೆ. 2013-14ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಸರಣಿ ಸೋತಿತ್ತು.
► 2015ರಲ್ಲಿ ನಡೆದಿದ್ದ ಆ್ಯಶಸ್ ಸರಣಿಯಲ್ಲಿ ಆಡಿದ್ದ ಆಸ್ಟ್ರೇಲಿಯದ ಆರು ಆಟಗಾರರು ಪ್ರಸ್ತುತ ತಂಡದಲ್ಲಿದ್ದು ಅವರುಗಳೆಂದರೆ: ಸ್ಮಿತ್, ಲಿಯೊನ್, ಹೇಝಲ್‌ವುಡ್, ಮಾರ್ಷ್ ಹಾಗೂ ಸ್ಟಾರ್ಕ್. ಇಂಗ್ಲೆಂಡ್ ತಂಡದಲ್ಲೂ ಆರು ಆಟಗಾರರಿದ್ದಾರೆ ಅವರುಗಳೆಂದರೆ: ಕುಕ್, ರೂಟ್, ಬೈರ್‌ಸ್ಟೊವ್, ಮೊಯಿನ್, ಬ್ರಾಡ್ ಹಾಗೂ ಆ್ಯಂಡರ್ಸನ್.
►ಕ್ರೆಗ್ ಮೆಕ್‌ಡೆರ್ಮೊಟ್ ದಾಖಲೆಯನ್ನು ಮುರಿದು ಆಸ್ಟ್ರೇಲಿಯದ ಆರನೆ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಪಟ್ಟಿಗೆ ಸೇರಲು ಲಿಯೊನ್‌ಗೆ ಇನ್ನು 23 ವಿಕೆಟ್‌ಗಳ ಅಗತ್ಯವಿದೆ.







