ಸೈನಾ, ಸಿಂಧು ಶುಭಾರಂಭ
ಹಾಂಕಾಂಗ್ ಓಪನ್

ಹಾಂಕಾಂಗ್, ನ.22: ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಹಾಂಕಾಂಗ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಬುಧವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಡೆನ್ಮಾರ್ಕ್ ನ ಮ್ಯಾಟ್ ಪೌಲ್ಸನ್ ವಿರುದ್ಧ 21-19, 23-21 ಗೇಮ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಪಿ.ವಿ.ಸಿಂಧು ಹಾಂಕಾಂಗ್‌ನ ಲೆಯುಂಗ್ ಯುಯೆಟ್ ಯೀ ಅವರನ್ನು 21-18, 21-10 ಗೇಮ್‌ಗಳ ಅಂತರದಿಂದ ಮಣಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಹಾಂಕಾಂಗ್‌ನ ಹ್ಯೂ ಯುನ್‌ರನ್ನು 19-21, 21-17, 21-15 ಗೇಮ್‌ಗಳ ಅಂತರದಿಂದ ಸೋಲಿಸಿದ ಎಚ್.ಎಸ್. ಪ್ರಣಯ್ ಎರಡನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಮಂಗಳವಾರ ಎರಡು ಅರ್ಹತಾ ಸುತ್ತಿನ ಪಂದ್ಯಗಳನ್ನು ಜಯಿಸಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದ ಪಾರುಪಲ್ಲಿ ಕಶ್ಯಪ್ ತನ್ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಇನ್ನೋರ್ವ ಕ್ವಾಲಿಫೈಯರ್ ಲೀ ಡಾಂಗ್ ಕ್ಯೂಯುನ್ ವಿರುದ್ಧ ಶರಣಾಗಿದ್ದಾರೆ. ಸೌರಭ್ ವರ್ಮ ಇಂಡೋನೇಷ್ಯಾದ ಟಾಮ್ಮಿ ಸುಗಿಯಾಟೊ ವಿರುದ್ಧ 15-21, 8-21 ರಿಂದ ಶರಣಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ. 2010ರ ಹಾಂಕಾಂಗ್ ಓಪನ್ ಚಾಂಪಿಯನ್ ಸೈನಾ ಮುಂದಿನ ಸುತ್ತಿನಲ್ಲಿ ಚೆನ್ ಯುಫೆ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿ ರೆಡ್ಡಿ ಚೀನಾದ ಜೋಡಿ ಹ್ಯುಯಾಂಗ್ ಡಾಂಗ್‌ಪಿಂಗ್ ಹಾಗೂ ಲಿ ವೆನ್‌ಮಿ ವಿರುದ್ಧ 11-21, 21-19, 19-21 ಗೇಮ್‌ಗಳಿಂದ ಸೋಲುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದೆ.







