ಸ್ಪಾಟ್ ಫಿಕ್ಸರ್‌ಗಳ ಹೆಸರು ಬಹಿರಂಗವಾಗಲಿ
ಸುಪ್ರೀಂಗೆ ಅನುರಾಗ್ ಠಾಕೂರ್ ಮನವಿ

ಹೊಸದಿಲ್ಲಿ, ನ.22: 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ 13 ಜನರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಬಿಸಿಸಿಐನ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ.
ಜಸ್ಟಿಸ್ ಮುಕುಲ್ ಮುದ್ಗಲ್ ಸಮಿತಿಯು 2014ರ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸ್ಪಾಟ್‌ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಹೆಸರನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿತ್ತು. ‘‘ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಕ್ರಿಕೆಟಿಗರು ಹಾಗೂ ಆಡಳಿತಾಧಿಕಾರಿಗಳನ್ನು ಶಿಕ್ಷಿಸುವ ನಿಟ್ಟಿನಲ್ಲಿ ಬಿಸಿಸಿಐ ಹೆಚ್ಚು ಸಕ್ರಿಯವಾಗಿದೆ’’ ಎಂದು ಈ ವರ್ಷದ ಜನವರಿಯಲ್ಲಿ ಸುಪ್ರೀಂಕೋರ್ಟ್‌ನಿಂದ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲ್ಪಟ್ಟಿದ್ದ ಠಾಕೂರ್ ಹೇಳಿದ್ದಾರೆ. ‘‘ನನಗೆ ವ್ಯಕ್ತಿ ಮುಖ್ಯವಲ್ಲ,ಸಂಸ್ಥೆ ಮುಖ್ಯ. ನಾನು ಯಾವುದೇ ಆಟಗಾರನ ಬಗ್ಗೆ ಚಿಂತಿಸುವುದಿಲ್ಲ. ಬಿಸಿಸಿಐಯನ್ನು ಕೇವಲ ಒಂದು ಸಂಸ್ಥೆಯಾಗಿ ಪರಿಗಣಿಸುವೆ. ಆಟಗಾರರ ಹೆಸರನ್ನು ಒಳಗೊಂಡಿರುವ ಲಕೋಟೆಯನ್ನು ಸುಪ್ರೀಂಕೋರ್ಟ್ ಇನ್ನೂ ತೆರೆದಿಲ್ಲ. ಯಾರೇ ಆಗಲಿ ಮ್ಯಾಚ್ ಫಿಕ್ಸಿಂಗ್ ಅಥವಾ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಅವರಿಗೆ ಕಠಿಣ ಶಿಕ್ಷೆ ನೀಡಬೇಕು. ಯಾರೂ ಕ್ರೀಡೆಗಿಂತ ದೊಡ್ಡವರಲ್ಲ. ಈ ಹಿಂದೆ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಆರೋಪ ಎದುರಿಸಿದ್ದವರು ಈಗ ಟಿವಿ ಚಾನಲ್‌ಗಳಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕಾದ ಅಗತ್ಯವಿದೆ’’ ಎಂದು ಠಾಕೂರ್ ಆಗ್ರಹಿಸಿದ್ದಾರೆ.





