ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಫಲಾನುಭವಿಗೆ 5 ತಿಂಗಳಾದರೂ ತಲುಪದ ಮಂಜೂರಾದ ಸಾಲ
ಮಂಗಳೂರು, ನ. 22: ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಶಾಂತಿ ಪಡ್ಪು ಅಂಬ್ಲ ಮೊಗರುವಿನ ನಿವಾಸಿ ಎ.ಎಸ್.ಮುಹಮ್ಮದ್ ಎಂಬವರಿಗೆ ಶ್ರಮಶಕ್ತಿ ಸಾಲ ಯೋಜನೆಯಡಿ 2016-17ನೆ ಸಾಲಿನಲ್ಲಿ ಬಟ್ಟೆ ಮೇಲೆ ಬಣ್ಣಗಾರಿಕೆಗಾಗಿ 25 ಸಾವಿರ ರೂ. ಮಂಜೂರಾಗಿದ್ದರು ಐದು ತಿಂಗಳಾದರೂ ಇನ್ನೂ ಫಲಾನಿಭವಿಯ ಕೈಗೆ ಸಿಗಲಿಲ್ಲ. ಆದರೆ ಸಾಲದ ಕಂತು ಕಟ್ಟಲು ವಿತರಿಸಲಾದ ಪಾಸ್ ಬುಕ್ ನೀಡಿದಾಗ ಫಲಾನುಭವಿಗೆ ಈಗಾಲೇ ಸೂಚನೆ ನೀಡಲಾಗಿದೆ.
ತನಗೆ ಮಂಜೂರಾದ ಸಾಲದ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಕೇಳಿದಾಗ ಅವರು ಬ್ಯಾಂಕ್ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಬ್ಯಾಂಕ್ ಅಧಿಕಾರಿಯನ್ನು ಕೇಳಿದಾಗ ಮಂಜೂರಾದ ಸಾಲ ನಿಮ್ಮ ಖಾತೆಗೆ ಜಮೆ ಆಗಿಲ್ಲ ಎನ್ನುವ ಉತ್ತರ ದೊರೆಯುತ್ತಿದೆ. ಹಾಗಾದರೆ ನನಗೆ ಮಂಜೂರಾದ ಸಾಲದ ಹಣ ಎಲ್ಲಿ ಹೋಯಿತು. ಈ ಬಗ್ಗೆ ತನಿಖೆಯಾಗಬೇಕು, ನನಗೆ ನ್ಯಾಯ ದೊರೆಯಬೇಕು ಎಂದು ತೊಂದರೆಗೊಳಗಾದ ಫಲಾನುಭವಿ ಮುಹಮ್ಮದ್ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿಗೆ ಲಿಖಿತ ದೂರು ನೀಡಿರುವುದಾಗಿ ಸುದ್ದಿಗಾರರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಎ.ಎಸ್.ಮುಹಮ್ಮದ್ ಅವರಿಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸ್ವಾಲಂಬನೆ/ಶ್ರಮ ಶಕ್ತಿ ಸಾಲ ಯೋಜನೆಯ ಮೂಲಕ ಜೂನ್ 17, 2017ರಂದು ರೂ 25 ಸಾವಿರ (ಖಾತೆ ಸಂಖ್ಯೆ 41/2016-17. ಎ.ಎಸ್.ಮೊಹಮ್ಮದ್ ) ಎಂಬವರಿಗೆ ಸಿಂಡಿಕೇಟ್ ಬ್ಯಾಂಕ್ ದೇರಳಕಟ್ಟೆ ಶಾಖೆಯ ಮೂಲಕ ಮಂಜೂರು ಮಾಡಲಾಗಿರುವ ದಾಖಲೆ ಅವರಿಗೆ ತಲುಪಿದೆ. ನಿಗಮದಿಂದ ಮುದ್ರಿತ ಪಾಸ್ ಬುಕ್ ಕೂಡಾ ನೀಡಲಾಗಿದೆ. ಈ ಪುಸ್ತಕದಲ್ಲಿ 25 ಸಾವಿರ ಸಾಲವನ್ನು ಮಂಜೂರು ಮಾಡಲಾಗಿದ್ದು ಅಸಲು 358 ಬಡ್ಡಿ 42 ರೂ.ಗಳಂತೆ ತಲಾ 400 ರೂ.ಗಳನ್ನು 36 ಕಂತುಗಳಲ್ಲಿ ಪಾವತಿ ಮಾಡಲು ಈ ಪಾಸ್ ಪುಸ್ತಕ ನೀಡಿದಾಗಲೇ ಸೂಚಿಸಲಾಗಿದೆ.
2016-17 ನೆ ಸಾಲಿನ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ತಲಾ 25 ಸಾವಿರದಂತೆ 33ಜನ ಫಲಾನುಭವಿಗಳಿಗೆ ಶ್ರಮ ಶಕ್ತಿ ಯೋಜನೆಯಲ್ಲಿ ಸಾಲ ಮಂಜೂರಾಗಿದೆ. (ಈ ಪಟ್ಟಿಯ ಪ್ರಕಾರ 8,25,000 ರೂಪಾಯಿ ಐದು ತಿಂಗಳ ಹಿಂದೆಯೇ ವಿವಿಧ ಬ್ಯಾಂಕ್‌ಗಳ ಮೂಲಕ ಮಂಜೂರಾಗಿ ಫಲಾನುಭವಿಗಳ ಖಾತೆ ಗೆ ಬಿಡುಗಡೆಗೆ ಆಗಬೇಕಾಗಿತ್ತು ) ಎನ್ನುವ ವಿವರ ವಿವಿಧ ಬ್ಯಾಂಕ್ ಶಾಖೆಯ ಹೆಸರಿನೊಂದಿಗೆ ದಾಖಲಾಗಿದೆ. ಈ ಪಟ್ಟಿಯ ಕ್ರಮ ಸಂಖ್ಯೆ 11ರಲ್ಲಿ ಎ.ಎಸ್.ಮುಹಮ್ಮದ್‌ರವರಿಗೆ ಮಂಜೂರಾದ ಸಾಲದ ವಿವರಗಳು ಇದೆ. ಆದರೆ ಹಣ ಇನ್ನೂ ಕೈ ಸೇರಿಲ್ಲ ಎನ್ನುವುದು ಫಲಾನಿಭವಿಯ ಆರೋಪ.







