ವಿವಿಧ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ 1.86 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್: ಸಿಎಂ ಸಿದ್ದರಾಮಯ್ಯ
ಸರಕಾರಿ ಉಪಕರಣಾಗಾರ, ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಬೆಳಗಾವಿ, ನ.22: ಯುವಕರನ್ನು ಉದ್ಯೋಗಗಳಿಗಾಗಿ ತರಬೇತಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ 22ನೆ ಕೇಂದ್ರವಾಗಿ ಚಿಕ್ಕೋಡಿಯಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ನಿರ್ಮಿಸಲಾಗಿದ್ದು, ಈ ಭಾಗದ ಯುವಕ, ಯುವತಿಯರು ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಉದ್ಯೋಗಗಳನ್ನು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಬುಧವಾರ ಚಿಕ್ಕೋಡಿ ನಗರದ ಸರಕಾರಿ ಪದವಿ ಕಾಲೇಜು ಸಮೀಪದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಉಪಕರಣಾಗಾರ ಮತ್ತು ತರಬೇತಿ (ಜಿಟಿಜಿಸಿ) ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುನ್ನತ ತರಬೇತಿ ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ಶೇ.100 ರಷ್ಟು ಉದ್ಯೋಗ ಲಭಿಸುವುದು ನಿಶ್ಚಿತ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ವಿವಿಧೆಡೆ ಉದ್ಯೋಗಕ್ಕೆ ಸೇರಲು ಹಾಗೂ ಸ್ವ ಉದ್ಯೋಗವನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈಗಾಗಲೇ ಕೌಶಾಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ 5 ಲಕ್ಷ ಯುವಕ, ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಪಿಯುಸಿ ನಂತರದ ವಿವಿಧ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.86 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡಲಾಗುವುದು ಎಂದು ತಿಳಿಸಿದರು.
ಸರಕಾರ ರಾಜ್ಯದ ಜನರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿದೆ. ಹಸಿವು ಮುಕ್ತ, ಗುಡಿಸಲು ಮುಕ್ತ ಹಾಗೂ ಭಯ ಮುಕ್ತ ಸಮಾಜ ನಿರ್ಮಾಣ ಸರಕಾರದ ಗುರಿಯಾಗಿದೆ ಎಂದು ಸಿಎಂ ವಿವರಿಸಿದರು.
ಸಂಸದ ಪ್ರಕಾಶ್ ಹುಕ್ಕೇರಿ ಮಾತನಾಡಿ, ಮತಕ್ಷೇತ್ರದ ಮಲ್ಲಿಗವಾಡ, ಶಿರಗಾವಿ, ಖಾನಾಪುರ ಸೇರಿದಂತೆ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ, ವಿವಿಧ ನೀರಾವರಿ ಯೋಜನೆಗಳು ಸೇರಿದಂತೆ ರಾಜ್ಯ ಸರಕಾರದಿಂದ ಚಿಕ್ಕೋಡಿ-ಸದಲಗಾ ಮತಕ್ಷೇತ್ರದಲ್ಲಿ 6 ಸಾವಿರ ಕೋಟಿ ರೂ.ವೆಚ್ಚದ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಿಕ್ಕೋಡಿಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜ್‍ನ್ನು ನಿರ್ಮಿಸಬೇಕು ಹಾಗೂ ಚಿಕ್ಕೋಡಿ ಮತ್ತು ಗೋಕಾಕ ತಾಲೂಕುಗಳನ್ನು ಶೀಘ್ರವೇ ಜಿಲ್ಲೆಗಳನ್ನಾಗಿ ಘೋಷಿಸಬೇಕು ಎಂದು ಅವರು ಮುಖ್ಯಮಂತ್ರಿಗೆ ಇದೇ ವೇಳೆ ಸಲ್ಲಿಸಿದರು.
ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್ ಮಾತನಾಡಿ, ಈಗಾಗಲೇ ರಾಜ್ಯಾದ್ಯಂತ ನೀರಾವರಿಗಾಗಿ 45 ಸಾವಿರ ಕೋಟಿ ರೂ.ಖರ್ಚು ಮಾಡಲಾಗಿದೆ. ಅದರಲ್ಲಿ ಬೆಳಗಾವಿ ಜಿಲ್ಲೆಗೆ ವಿವಿಧ ನೀರಾವರಿ ಯೋಜನೆಯಡಿ ನೀರಾವರಿಗಾಗಿ 4 ಸಾವಿರ ಕೋಟಿ ರೂ. ನೀಡಲಾಗಿದ್ದು, ಜತೆಗೆ ಜಿಲ್ಲೆಯಲ್ಲಿ ಯಾವ ಯಾವ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಮ್ಮ ಸರಕಾರದ ಅವಧಿಯಲ್ಲಿ ಪ್ರತಿಯೊಂದು ವಿಧಾನಮಂಡಲ ಅಧಿವೇಶನಗಳಲ್ಲೂ ವಿವಿಧ ಕಾಯ್ದೆ ಹಾಗೂ ಮಸೂದೆಗಳನ್ನು ರೂಪಿಸಲಾಗುತ್ತಿದೆ. ರಾಜ್ಯ ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ವಿವಿಧ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜಕೀಯ ಸ್ಥಿರತೆ ಹಾಗೂ ಸಮರ್ಥ ಆಡಳಿತವನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಟಿಟಿಸಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಆರ್.ರಘು, ಶಾಸಕ ಗಣೇಶ್ ಹುಕ್ಕೇರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಸ್.ಝಿಯಾವುಲ್ಲಾ, ಜಿ.ಪಂ. ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ರಾಮಚಂದ್ರನ್.ಆರ್., ಬೆಳಗಾವಿ ಉತ್ತರ ವಲಯ ಐಜಿಪಿ ರಾಮಚಂದ್ರರಾವ್, ಎಸ್‍ಪಿ ರವಿಕಾಂತೇಗೌಡ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.







