ಬಾಲ್ಯದ ಗೆಳತಿಯನ್ನು ವಿವಾಹವಾದ ಭುವನೇಶ್ವರ್
ಮೀರತ್/ಮುಂಬೈ, ನ.23: ಭಾರತದ ಮಾಜಿ ವೇಗದ ಬೌಲರ್ ಝಹೀರ್ ಖಾನ್ ಮುಂಬೈನಲ್ಲಿ ಗೆಳತಿ ಸಾಗರಿಕಾ ಘಾಟ್ಗೆ ಅವರನ್ನು ನೋಂದಣಿ ವಿವಾಹವಾದರೆ, ವೇಗದ ಬೌಲರ್ ಭುವನೇಶ್ವರ್ ಕುಮಾರ್ ತವರು ಪಟ್ಟಣ ಮೀರತ್ನಲ್ಲಿ ಬಾಲ್ಯದ ಗೆಳತಿ ನೂಪುರ್ ನಾಗರ್ರನ್ನು ವಿವಾಹವಾಗಿದ್ದಾರೆ. ಭುವನೇಶ್ವರ ಕುಮಾರ್ ವಿವಾಹವಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಭುವಿಯಿಂದ ತೆರವಾದ ಸ್ಥಾನಕ್ಕೆ ವಿಜಯ್ ಶಂಕರ್ ಆಯ್ಕೆಯಾಗಿದ್ದರು. ಎರಡು ದಿನಗಳ ವಿವಾಹ ಸಂಭ್ರಮಾಚರಣೆಯ ಬಳಿಕ ಭುವನೇಶ್ವರ್ ನೂಪುರ್ ತವರೂರು ಬುಲಂದರ್ ಶಹರ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಭುವಿ ಮದುವೆಗೆ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಆಗಮಿಸಿದ್ದರು. ಝಹೀರ್ ಖಾನ್ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಮುಂಬೈನಲ್ಲಿ ಗುರುವಾರ ನೋಂದಣಿ ಮದುವೆಯಾಗಿದ್ದಾರೆ. ಈ ಜೋಡಿ ಅ.4 ರಂದು ಗ್ರೇಟರ್ ನೊಯ್ಡಾದಲ್ಲಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿತ್ತು. ನವೆಂಬರ್ನಲ್ಲಿ ಮುಂಬೈನ ತಾಜ್ ಹೊಟೇಲ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಝಹೀರ್ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ವೇಗಿ ಆಶೀಷ್ ನೆಹ್ರಾ ಪತ್ನಿಯೊಂದಿಗೆ ಭಾಗವಹಿಸಿದ್ದರು.