ಅಪಘಾತ ಪ್ರಕರಣ: ಆರೋಪಿ ಲಾರಿ ಚಾಲಕನಿಗೆ ಶಿಕ್ಷೆ
ಉಡುಪಿ, ನ.24: ಅಪಘಾತ ನಡೆಸಿ ಬೈಕಿನ ಹಿಂಬದಿಯಲ್ಲಿದ್ದ ಮಹಿಳೆಯ ಸಾವಿಗೆ ಕಾರಣನಾದ ಆರೋಪಿ ಲಾರಿ ಚಾಲಕನಿಗೆ ಉಡುಪಿ ನ್ಯಾಯಾಲಯವು ಶಿಕ್ಷೆ ವಿಧಿಸಿ ನ.21ರಂದು ತೀರ್ಪು ನೀಡಿದೆ.
ಮಂಗಳೂರು ಮೂಡುಕೊಣಾಜೆಯ ಮಾಣಿಕ್ಯ ಶಿಕ್ಷೆಗೆ ಗುರಿಯಾದ ಲಾರಿ ಚಾಲಕ. ಈತ 2015ರ ಫೆ.23ರಂದು ಸಂಜೆ ವೇಳೆ ಲಾರಿಯನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಬ್ರಹ್ಮಾವರ ಕಡೆಯಿಂದ ಸಾಸ್ತಾನ ಕಡೆಗೆ ಚಲಾಯಿಸಿ ಕೊಂಡು ಬಂದು ಎದುರಿನಿಂದ ಹೋಗುತ್ತಿದ್ದ ಉಡುಪಿ ನ್ಯಾಯಾಲಯದ ಗುಮಾಸ್ತ ನಾಗೇಂದ್ರ ಬೈಕ್‌ನ್ನು ಓವರ್ ಟೇಕ್ ಮಾಡಿ ಬಳಿಕ ಎದುರಿನಲ್ಲಿದ್ದ ವಾಹನವನ್ನು ನೋಡಿ ಒಮ್ಮೇಲೆ ಎಡಕ್ಕೆ ತಿರುಗಿಸಿದ ಪರಿಣಾಮ ಲಾರಿಯ ಎದುರು ಭಾಗ ಬೈಕ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಬೈಕಿನಲ್ಲಿದ್ದ ನಾಗೇಂದ್ರ ಹಾಗೂ ಅವರ ಪತ್ನಿ ಜ್ಯೋತಿ ರಸ್ತೆಗೆ ಬಿದ್ದರು. ಈ ವೇಳೆ ಲಾರಿಯ ಚಕ್ರ ಜ್ಯೋತಿಯ ತಲೆ ಮೇಲೆ ಹರಿದು ಅವರು ಸ್ಥಳದಲ್ಲೇ ಮೃತಪಟ್ಟರೆಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಆಗಿನ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯ್ಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾ ಲಯವು ನಡೆಸಿತ್ತು. ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಮತ್ತು ವಾದ ವಿವಾದ ವನ್ನು ಆಲಿಸಿ ಆರೋಪಿ ಮೇಲಿನ ಆರೋಪವು ಸಾಬೀತಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್ ಆರೋಪಿಗೆ ಭಾ.ದಂ.ಸಂ ಕಲಂ 279, 337, 304(ಎ) ರಡಿ 1 ವರ್ಷ 8 ತಿಂಗಳು ಶಿಕ್ಷೆ ಮತ್ತು ಒಟ್ಟು 2,500ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.







