ಮಾನವ ಸಾಗಣೆ: ಪಶ್ಚಿಮ ಆಫ್ರಿಕದಲ್ಲಿ 500 ವಲಸಿಗರ ರಕ್ಷಣೆ
40 ಸಾಗಣೆದಾರರ ಬಂಧನ

ಪ್ಯಾರಿಸ್, ನ. 24: ಪಶ್ಚಿಮ ಆಫ್ರಿಕದಾದ್ಯಂತ ನಡೆಸಲಾದ ಮಾನವ ಸಾಗಣೆ ನಿಗ್ರಹ ದಾಳಿಯಲ್ಲಿ 40 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಸುಮಾರು 500 ವಲಸಿಗರನ್ನು ರಕ್ಷಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಪೊಲೀಸ್ ಸಂಘಟನೆ ಇಂಟರ್‌ಪೋಲ್ ಗುರುವಾರ ತಿಳಿಸಿದೆ.
ಆಫ್ರಿಕನ್ನರನ್ನು ಲಿಬಿಯದಲ್ಲಿ ಗುಲಾಮರಾಗಿ ಮಾರಾಟ ಮಾಡುತ್ತಿರುವ ವೀಡಿಯೊ ತುಣುಕುಗಳು ಬಹಿರಂಗಗೊಂಡ ಬಳಿಕ ಪ್ರಪಂಚದಾದ್ಯಂತ ವ್ಯಕ್ತವಾದ ಆಕ್ರೋಶದ ಹಿನ್ನೆಲೆಯಲ್ಲಿ ಇಂಟರ್‌ಪೋಲ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಯುರೋಪ್ ತಲುಪಲು ಬಯಸುವ ವಲಸಿಗರಿಗೆ ಲಿಬಿಯ ಸಾಮಾನ್ಯವಾಗಿ ಕೊನೆಯ ಭೂಪ್ರಯಾಣ ತಾಣವಾಗಿರುತ್ತದೆ.
ಚಾಡ್, ಮಾಲಿ, ಮರಿಟಾನಿಯ, ನೈಜರ್ ಮತ್ತು ಸೆನೆಗಲ್ ದೇಶಗಳಲ್ಲಿ ನಡೆಸಲಾದ ಏಕಕಾಲಿಕ ಕಾರ್ಯಾಚರಣೆಗಳಲ್ಲಿ 236 ಅಪ್ರಾಪ್ತ ಸೇರಿದಂತೆ ಸುಮಾರು 500 ಮಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿಕೆಯೊಂದರಲ್ಲಿ ಇಂಟರ್‌ಪೋಲ್ ತಿಳಿಸಿದೆ.
ಅದೇ ವೇಳೆ, 40 ಶಂಕಿತ ಮಾನವ ಸಾಗಣೆದಾರರನ್ನು ಬಂಧಿಸಲಾಗಿದೆ.
ಭಿಕ್ಷೆ ಬೇಡುವುದರಿಂದ ವೇಶ್ಯಾವಾಟಿಕೆವರೆಗಿನ ಹಲವಾರು ಚಟುವಟಿಕೆಗಳಲ್ಲಿ ತೊಡಗುವಂತೆ ವಲಸಿಗರನ್ನು ಬಲವಂತಪಡಿಸಲಾಗಿತ್ತು ಎಂದು ಆರೋಪಿಸಲಾಗಿದೆ.







