ಕರ್ನಾಟಕ ರಾಜ್ಯ ಕ್ರೈಸ್ಥರ ಅಭಿವೃದ್ದಿ ನಿಗಮ ಸ್ಥಾಪಿಸಿ: ಎ.ಸಿ ಜಯರಾಜ್
ಬೆಳ್ತಂಗಡಿ, ನ. 24: ರಾಜ್ಯದ ಅಲ್ಪಸಮಖ್ಯಾತ ಸಮುದಾಯವಾಗಿರುವ ಕ್ರೈಸ್ಥರು ಸರಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದು ಅವರಿಗೆ ಹೆಚ್ಚು ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಈಗ ಇರುವ ಕರ್ನಾಟಕ ಕ್ರೈಸ್ಥರ ಅಭಿವೃದ್ದಿ ಸಮಿತಿಯನ್ನು ಕೂಡಲೇ ರದ್ದು ಪಡಿಸಿ ಕರ್ನಾಟಕ ರಾಜ್ಯ ಕ್ರೈಸ್ಥರ ಅಭಿವೃದ್ದಿ ನಿಗಮವನ್ನು ಸ್ಥಾಪಿಸುವಂತೆ ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್‌ನ ರಾಜ್ಯ ಅಧ್ಯಕ್ಷ ಎ.ಸಿ ಜಯರಾಜ್ ಒತ್ತಾಯಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮಕ್ಕೆ ರೂ 2750 ಕೋಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಕ್ರೈಸ್ಥರ ಪಾಲಿಗೆ 850 ಕೋಟಿ ಬರಬೇಕಾಗಿದೆ ಸರಕಾರ ಕ್ರೈಸ್ಥ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ಈ ಅನುದಾನವನ್ನು ಅದಕ್ಕೆ ವರ್ಗಾಯಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ವಿವಿಧ ಭಾಷೆಗಳನ್ನು ಮಾತನಾಡುವ ಸುಮಾರು 40 ಲಕ್ಷ ಮಂದಿ ಕ್ರ್ಯಸ್ಥರು ವಾಸಿಸುತ್ತಿದ್ದಾರೆ ಆದರೆ ಕ್ರೈಸ್ಥರ ಜನಸಂಖ್ಯೆ ಕೇವಲ 11 ಲಕ್ಷ ಎಂದು ಸರಕಾರದ ಲೆಕ್ಕ ಹೇಳುತ್ತಿದೆ ಇದರಿಂದಾಗಿ ಸಮಾಜಕ್ಕೆ ಹಲವು ತೊಂದರೆಗಳಾಗುತ್ತಿದೆ, ಉಧ್ಯೋಗದಲ್ಲಿಯೂ ಸಮುದಾಯಕ್ಕೆ ಸರಿಯಾದ ಮೀಸಲಾತಿ ದೊರಕುತ್ತಿಲ್ಲ ಎಂದ ಅವರು ಕ್ರೈಸ್ಥರಲ್ಲಿ ಬಹುಪಾಲು ಜನರು ಬಡತನ ರೇಖೆಯಿಂದ ಕೆಳಗೆ ವಾಸಿಸುತ್ತಿದ್ದಾರೆ ಆದರೆ ಸರಕಾರದ ಯೋಜನೆಗಳು ಅವರಿಗೆ ಸರಿಯಾಗಿ ತಲುಪುತ್ತಿಲ್ಲ ಈ ಹಿನ್ನಲೆಯಲ್ಲಿ ಕ್ರೈಸ್ಥರ ಜೀವನ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಸಮಿತಿಯೊಂದನ್ನು ನೇಮಿಸುವಂತೆ ಹಾಗೂ ಅವರಿಗೆ ಜೀವನ ಮಟ್ಟ ಸುಧಾರಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶದಿಂದ ಹೆಚ್ಚು ಸೌಲಭ್ಯಗಳನ್ನು ಒದಗಿಸುವಂತೆ ಅವರು ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಕಳೆದ ಕೆಲವು ವರ್ಷಗಳಿಂದ ಸರಕಾರಗಳ ಮುಂದೆ ಇಡುತ್ತಾ ಬಂದಿದ್ದೇವೆ ಹಲವಾರು ಮನವಿಗಳನ್ನೂ ಸಲ್ಲಿಸಲಾಗಿದೆ ಇದೇ ಬೇಡಿಕೆಯನ್ನು ಮುಂದಿಟ್ಟು ಕೊಂಡು ರಾಜ್ಯದ ಎಲ್ಲ ಕ್ರೈಸ್ಥ ಸಂಘಟನೆಗಳು ಸೇರಿಕೊಂಡು ಕ್ರೈಸ್ಥರ ನಡಿಗೆ ವಿಧಾನಸಭೆಯೆಡೆಗೆ ಎಂಬ ಕಾರ್ಯಕ್ರಮವನ್ನೂ ಮುಂದಿನ ದಿನಗಳಲ್ಲಿ ಹಮ್ಮಿಕೊಂಡು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಗೋಷ್ಟಿಯಲ್ಲಿ ಸಂಘಟನೆಯ ಮುಖಂಡರುಗಳಾದ ಎ.ಸಿ ಕುರಿಯನ್, ಎ.ಸಿ ಮ್ಯಾಥ್ಯೂ, ಅಜಯ್ ಎ.ಜೆ, ಆಂಟನಿ ಎ.ಜೆ, ಸೆಬಾಸ್ಟಿಯನ್ ಕಳೆಂಜ ಉಪಸ್ಥಿತರಿದ್ದರು.







