ಮಾ.31ರೊಳಗೆ 'ಬಯಲು ಬಹಿರ್ದೆಸೆ ಮುಕ್ತ ರಾಜ್ಯ' ನಿರ್ಮಾಣ: ಸಚಿವ ಪಾಟೀಲ್

ಬೆಳಗಾವಿ, ನ.24: ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ರಮುಖ ಉದ್ದೇಶ ಬಯಲು ಬಹಿರ್ದೆಸೆ ಪದ್ಧತಿಯನ್ನು ನಿರ್ಮೂಲನೆ ಗೊಳಿಸುವುದಾಗಿದ್ದು, 2018ರ ಮಾರ್ಚ್ 31ರೊಳಗೆ ಕರ್ನಾಟಕವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ರೂಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಪಕ್ಷೇತರ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಹೊರತುಪಡಿಸಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಸಾಕಷ್ಟು ಪ್ರಗತಿ ಕಂಡಿದೆ. ವಿಜಯಪುರದಲ್ಲಿ ಮಾತ್ರ ಶೇ.35ರಷ್ಟು ಸಾಧನೆಯಾಗಿದೆ. ಇದನ್ನು ಚುರಕುಗೊಳಿಸಲು ಜಿಲ್ಲಾ ಪಂಚಾಯತ್ ಸಿಇಒ, ಅಧಿಕಾರಿಗಳು ಹಾಗೂ ಗ್ರಾಮಪಂಚಾಯತ್ ಅಧ್ಯಕ್ಷರು, ಸದಸ್ಯರಿಗೆ ಸೂಚನೆ ನೀಡಲಾಗಿದ್ದು, ಇದಕ್ಕೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಶೌಚಾಲಯ ನಿರ್ಮಾಣ ಕಾರ್ಯಕ್ರಮವು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಕೇಂದ್ರದ ಪಾಲು ಹೆಚ್ಚಿಸಿದ್ದಲ್ಲಿ, ರಾಜ್ಯ ಸರಕಾರವು ತನ್ನ ಪಾಲಿನ ಅನುದಾನವನ್ನು ಹೆಚ್ಚಿಸಿ ಫಲಾನುಭವಿಗಳಿಗೆ ನೀಡಲು ಸಿದ್ಧವಿದೆ. ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಅತ್ಯಂತ ವೇಗವಾಗಿ ಕರ್ನಾಟಕದಲ್ಲಿ ಬಯಲು ಬಹಿರ್ದೆಸೆ ಮುಕ್ತ ಯೋಜನೆಯ ಸಾಕಾರಕ್ಕಾಗಿ ಶೌಚಾಲಯಗಳ ನಿರ್ಮಾಣ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದರು.
ರಾಜ್ಯದ 12 ಜಿಲ್ಲೆಗಳ 89 ತಾಲೂಕು ಹಾಗೂ 3110 ಗ್ರಾಪಂಗಳ, 16,153 ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಗೊಳಿಸಲಾಗಿದೆ. 2018ರ ಮಾ.31ಕ್ಕೆ ಇಡೀ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸುವುದು ಮುಖ್ಯಮಂತ್ರಿ ಅವರ ಕನಸಾಗಿದೆ ಎಂದು ತಿಳಿಸಿದರು.
ಗ್ರಾಮ ಸ್ವರಾಜ್ 2ನೆ ಹಂತಕ್ಕೆ 2 ಸಾವಿರ ಕೋಟಿ ವಿಶ್ವಬ್ಯಾಂಕ್ ನೆರವು: ವಿಶ್ವ ಬ್ಯಾಂಕ ನೆರವಿನ ಗ್ರಾಮ ಸ್ವರಾಜ್ 2ನೆ ಹಂತದ ಯೋಜನೆಯ ಪ್ರಸ್ತಾವನೆಯು ವಿಶ್ವ ಬ್ಯಾಂಕಿಗೆ ಸಲ್ಲಿಕೆಯಾಗಿದೆ. ಕರ್ನಾಟಕ ರಾಜ್ಯದ ಕಾರ್ಯನಿರ್ವಹಣೆಯನ್ನು ಪ್ರಶಂಸೆ ಮಾಡಿರುವ ಬ್ಯಾಂಕ್ 2 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ ಎಂದು ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಕೇಳಿದ ಪ್ರಶ್ನೆಗೆ ಪಾಟೀಲ್ ಉತ್ತರಿಸಿದರು.
ಡಾ. ಡಿ.ಎಂ ನಂಜುಂಡಪ್ಪ ವರದಿ ಅನುಸಾರ ಅತ್ಯಂತ ಹಿಂದುಳಿದ 39, ಅತೀ ಹಿಂದುಳಿದ 40 ತಾಲೂಕುಗಳು ಸೇರಿ ಒಟ್ಟು 79 ತಾಲೂಕುಗಳ 2790 ಗ್ರಾಮ ಪಂಚಾಯತ್ ಗಳ ಸಮಗ್ರ ಅಭಿವೃದ್ಧಿಗೆ ಕನಾಟಕ ವಿತ್ತೀಯ ಸುಧಾರಣಾ ಕಾಯ್ದೆ 2002ರ ಪ್ರಕಾರ ಧೀರ್ಘ ಕಾಲಿಕ ಸಾಲದ ರೂಪದಲ್ಲಿ ನೆರವು ನೀಡಲು ಉದ್ದೇಶಿಸಲಾಗಿದೆ. ವಿಶ್ವ ಬ್ಯಾಂಕಿನವರು ರಾಜ್ಯ ಸರಕಾರಕ್ಕೆ ನೀಡುವ ಸಾಲವನ್ನು ಗ್ರಾಮ ಪಂಚಾಯತ್ ಗಳಿಗೆ ಸಾಲ ರೂಪದಲ್ಲಿ ನೀಡದೇ ಅನುದಾನ ರೂಪದಲ್ಲಿ ನೀಡಬೇಕೆಂಬ ನಿಲುವು ತಳೆದಿದ್ದಾರೆ. ಈ ದಿಸೆಯಲ್ಲಿ ಒಮ್ಮತ ಮೂಡಿಸಿ ವಿಶ್ವಬ್ಯಾಂಕ್ ನೆರವು ಪಡೆಯುವ ಪ್ರಯತ್ನ ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.







