ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಸರ್ಟಿಫಿಕೇಟ್ ಕೋರ್ಸ್: ಸಚಿವ ಪಾಟೀಲ್
ಬೆಳಗಾವಿ, ನ.24: ಗದಗ ನಗರದಲ್ಲಿ 2017-18ನೆ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾನಿಲಯ ಆರಂಭವಾಗಿದ್ದು, ಸದ್ಯ 5 ಸ್ನಾತಕೋತ್ತರ ವಿಭಾಗಗಳು ಆರಂಭವಾಗಿವೆ. ಮುಂಬರುವ ವರ್ಷಗಳಲ್ಲಿ ಸರ್ಟಿಫಿಕೇಟ್ ಕೋರ್ಸು ಹಾಗೂ ಡಿಪ್ಲೋಮ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದಲ್ಲಿ 172 ಹುದ್ದೆಗಳನ್ನು ಸೃಜಿಸಲಾಗಿದೆ ಎಂದರು.
ಐದು ವಿಭಾಗಗಳನ್ನು ಶಾಲೆಗಳೆಂದು ಇಲ್ಲಿ ಕರೆಯಲಾಗುತ್ತಿದ್ದು, ಗ್ರಾಮೀಣ ಕೃಷಿ ವ್ಯವಹಾರ ನಿರ್ವಹಣೆ, ಗ್ರಾಮೀಣಾಭಿವೃದ್ಧಿ ಹಾಗೂ ಉದ್ಯಮಶೀಲತಾ ನಿರ್ವಹಣೆಯ ವಿಶೇಷತೆಯೊಂದಿಗೆ ಎಂಬಿಎ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ / ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರಿ ನಿರ್ವಹಣೆ ವಿಷಯಗಳಲ್ಲಿ ಎಂಎ ಜಿಯೋ ಇನ್ಫರ್ ಮೇಟಿಕ್ಸ್ ನಲ್ಲಿ ಎಂಎಸ್ಸಿ, ಗ್ರಾಮೀಣ ಪುನರ್ ನಿರ್ಮಾಣದಲ್ಲಿ ಎಂಎಸ್ ಡಬ್ಲ್ಯು ಹಾಗೂ ಉದ್ಯಮಶೀಲತೆ/ಸಹಕಾರಿ ನಿರ್ವಹಣೆಯಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿಗಳನ್ನು 2017-18 ರಿಂದ ಆರಂಭಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ವಿವಿಧ ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಶ್ವ ವಿದ್ಯಾನಿಲಯವು ಪದವಿ ಹಾಗೂ ಇತರ ಕೋರ್ಸುಗಳನ್ನು ಕೇವಲ ಸರಕಾರಿ ನೌಕರಿ ಪಡೆಯುವದಕ್ಕಾಗಿ ಬೋಧಿಸುವದಿಲ್ಲ, ಬದಲಿಗೆ ಗ್ರಾಮೀಣಾಭಿವೃದ್ಧಿಯ ಸಮಗ್ರ ದೃಷ್ಟಿಕೋನ ಮತ್ತು ಜ್ಞಾನ ಹೊಂದಿರುವ ಮಾನವ ಸಂಪನ್ಮೂಲ ಸೃಷ್ಟಿಸುವದಾಗಿದೆ. ವಿವಿಯು ಕೋರ್ಸುಗಳನ್ನು ಪ್ರಾರಂಭಿಸುವಾಗ ಅನೇಕ ವಿಷಯ ತಜ್ಞರ ಸಮಿತಿಗಳನ್ನು ರಚಿಸಿ, ಹತ್ತು ಹಲವು ಸಭೆಗಳಲ್ಲಿ ವಿಸ್ತೃತ ವಾಗಿ ಚರ್ಚಿಸಿ, ರೂಪಿಸಲಾಗಿದೆ. ಆಸಕ್ತ ಶಾಸಕರು, ವಿಧಾನ ಪರಿಷತ್ ಸದಸ್ಯರೊಂದಿಗೂ ಸಹ ಚಿಂತನೆ ನಡೆಸಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.







