ವಿಶ್ವವಿದ್ಯಾನಿಲಯಗಳ ವಿಧೇಯಕ ಪರಿಶೀಲನಾ ಸಮಿತಿಗೆ ಸರಕಾರ ಸಮ್ಮತಿ
.jpg)
ಬೆಳಗಾವಿ, ನ.24: ರಾಜ್ಯ ವಿಶ್ವವಿದ್ಯಾನಿಲಯಗಳ ವಿಧೇಯಕ-2017ರ ಮೇಲೆ ಹೆಚ್ಚಿನ ಸದಸ್ಯರು ಚರ್ಚೆ ಮಾಡಬೇಕಾಗಿರುವುದರಿಂದ ಇದನ್ನು ವಿಧಾನಪರಿಷತ್ತಿನ ಸದನ ಪರಿಶೀಲನಾ ಸಮಿತಿ(ಸೆಲೆಕ್ಟ್ ಕಮಿಟಿ)ಗೆ ಒಪ್ಪಿಸುವಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ನೀಡಿದ ಸಲಹೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ ಸಹಮತ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯರ ಧರಣಿ ಹಿನ್ನೆಲೆಯಲ್ಲಿ 10 ನಿಮಿಷಗಳ ಕಾಲ ಮುಂದೂಡಲ್ಪಟ್ಟಿದ್ದ ಸದನವು ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಶಂಕರಮೂರ್ತಿ, ವಿಧೇಯಕವನ್ನು ಸದನ ಸಮಿತಿಗೆ ಒಪ್ಪಿಸುವಂತೆ ಸಲಹೆ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜರಾಯರಡ್ಡಿ, ಸದನ ಸಮಿತಿಯ ಬದಲು ಸಂಬಂಧಪಟ್ಟ ಸದಸ್ಯರನ್ನು ಕರೆದು ಚರ್ಚೆ ನಡೆಸುತ್ತೇನೆ ಎಂದರು.
ಆದರೆ, ಹೆಚ್ಚಿನ ಸದಸ್ಯರು ಈ ವಿಧೇಯಕದ ಮೇಲೆ ಚರ್ಚೆ ಮಾಡಬೇಕಾಗಿರುವುದರಿಂದ ಸದನ ಸಮಿತಿಗೆ ಒಪ್ಪಿಸುವುದು ಉತ್ತಮ ಎಂದು ಸಭಾಪತಿ ಸಲಹೆ ನೀಡಿದ್ದರಿಂದ, ಸಚಿವರು ಅದಕ್ಕೆ ಸಹಮತ ವ್ಯಕ್ತಪಡಿಸಿದರು.
ಆನಂತರ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಂಡಿಸಿದ ರಾಜ್ಯ ಭೂ ಕಂದಾಯ(ಮೂರನೆ ತಿದ್ದುಪಡಿ) ವಿಧೇಯಕ-2017, ರಾಜ್ಯ ಭೂ ಕಂದಾಯ(ನಾಲ್ಕನೆ ತಿದ್ದುಪಡಿ) ವಿಧೇಯಕ-2017 ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸಲ್ಪಟ್ಟಿತು.
ವಿಧಾನಪರಿಷತ್ತಿನ ಕಾರ್ಯಕಲಾಪ: 2017-18ನೆ ಸಾಲಿನ 8 ವರದಿಗಳಲ್ಲಿ ವಿಧಾನಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಯ 85ನೆ ವರದಿ, ಸದಸ್ಯರ ಖಾಸಗಿ ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ 2ನೇ ವರದಿಯನ್ನು ಹಾಗು ಕರ್ನಾಟಕ ವಿಧಾನಮಂಡಲದ ವಿವಿಧ ಸಮಿತಿಗಳ ಒಟ್ಟು 7 ವರದಿಗಳನ್ನು ವಿಧಾನಪರಿಷತ್ತಿನಲ್ಲಿ ಮಂಡಿಸಲಾಗಿದೆ.
ಶೂನ್ಯವೇಳೆಯ 41 ಸೂಚನೆಗಳ ಪೈಕಿ 33 ಸೂಚನೆಗಳಿಗೆ ಉತ್ತರಿಸಲಾಗಿದೆ. ಪ್ರಸ್ತುತ ಅಧಿವೇಶನದಲ್ಲಿ 1574 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಆ ಪೈಕಿ 150 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಲಾಗಿದ್ದು, 125 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. ಹಾಗೂ ಲಿಖಿತ ಮೂಲಕ ಉತ್ತರಿಸುವ ಒಟ್ಟು 1424 ಪ್ರಶ್ನೆಗಳ ಪೈಕಿ 866 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರವನ್ನು ಮಂಡಿಸಲಾಗಿದೆ.
ನಿಯಮ 72ರಡಿಯಲ್ಲಿ ಒಟ್ಟು 135 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ ಸದನದಲ್ಲಿ 6 ಸೂಚನೆಗಳು ಚರ್ಚೆಯಾಗಿವೆ. ಹಾಗೂ 47 ಸೂಚನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. ನಿಯಮ 330ರಡಿಯಲ್ಲಿ 62 ಸೂಚನೆಗಳನ್ನು ಪ್ರಸ್ತಾಪಿಸಲಾಗಿದ್ದು, 5 ಸೂಚನೆಗಳ ಉತ್ತರಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ. ಆ ಪೈಕಿ 23 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಗಿದೆ.
ನಿಯಮ 58ರಡಿ(ಅರ್ಧಗಂಟೆ ಕಾಲಾವಧಿ ಚರ್ಚೆ) ಒಟ್ಟು 2 ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದ್ದು, ಯಾವುದೇ ಚರ್ಚೆಯಾಗಿಲ್ಲ. ನಿಯಮ 59ರಡಿಯಲ್ಲಿ 3 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 1 ಸೂಚನೆಗೆ ಪ್ರಾಥಮಿಕ ಚರ್ಚೆಗೆ ಅವಕಾಶ ಕಲ್ಪಿಸಿ, ಸಂಬಂಧಪಟ್ಟ ಸಚಿವರು ಉತ್ತರಿಸಿದ್ದಾರೆ. ಇನ್ನುಳಿದ 2 ಸೂಚನೆಗಳನ್ನು ತಿರಸ್ಕರಿಸಲಾಗಿದೆ.
ನಿಯಮ 68ರಡಿಯಲ್ಲಿ 2 ಸೂಚನೆಯನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 1 ಸೂಚನೆಗೆ ಉತ್ತರಿಸಲಾಗಿದೆ. ಪ್ರಸಕ್ತ ಅಧಿವೇಶನಕ್ಕೆ ಇಬ್ಬರು ಸದಸ್ಯರ ಖಾಸಗಿ ವಿಧೇಯಕಗಳನ್ನು ಸ್ವೀಕರಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ 7 ಗಂಟೆ 30 ನಿಮಿಷಗಳ ಕಾಲ ಚರ್ಚೆ ನಡೆದಿದೆ.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 11 ವಿಧೇಯಕಗಳಿಗೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ನೀಡಲಾಗಿದೆ. ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ವಿಧೇಯಕ 2017ನ್ನು ಪರಿಶೀಲಿಸಲು ಸದನ ಸಮಿತಿಗೆವಹಿಸಲಾಗಿದೆ. ಲ್ಯಾಪ್‍ಟಾಪ್ ಖರೀದಿಗೆ ಸಂಬಂಧಪಟ್ಟಂತೆ ವಿಶೇಷ ಸದನ ಸಮಿತಿಯನ್ನು ರಚಿಸಲಾಗಿದೆ.







