ಮಡಿಕೇರಿ: ಜಮೀನು ವಿವಾದ; ಒಂದು ದಿನದ ನಿಷೇಧಾಜ್ಞೆ ಜಾರಿ
ಮಡಿಕೇರಿ, ನ.24: ವೀರಾಜಪೇಟೆ ತಾಲೂಕು, ಅಮ್ಮತ್ತಿ ಹೋಬಳಿ, ಬೆಟ್ಟಗೇರಿ ಗ್ರಾಮದ ವಿವಿಧ ಸರ್ವೇ ನಂಬರ್‌ಗಳ ಒಟ್ಟು 193 ಎಕರೆ ಜಾಗವನ್ನು 2017ರ ನ. 25 ರಂದು ತೆರವುಗೊಳಿಸಿ, ಜಾಗದ ಸ್ವಾಧೀನವನ್ನು ನಿ.ಪ್ರ.ಚನ್ನಬಸವ ದೇಶಿಕೇಂದ್ರ ಸ್ವಾಮೀಜಿಗಳು, ಕನ್ನಡ ಮಠ ಇವರ ಸುಪರ್ದಿಗೆ ನೀಡಲು ಉಚ್ಚ ನ್ಯಾಯಾಲಯದ ನಿರ್ದೇಶನವಿದೆ.
ಈ ವಿಚಾರದಲ್ಲಿ ವಿಫಲರಾದಲ್ಲಿ ನ್ಯಾಯಾಂಗ ನಿಂದನೆ, ದಂಡನೆಗೆ ಗುರಿಯಾಗುವ ಸಾಧ್ಯತೆ ಇರುವ ಬಗ್ಗೆ ಸರಕಾರಿ ವಕೀಲರು ತಿಳಿಸಿದ್ದಾರೆ ಎಂದು ವೀರಾಜಪೇಟೆ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಆರ್.ಗೋವಿಂದರಾಜು ಗಮನ ಸೆಳೆದಿದ್ದಾರೆ.
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಇದೇ ನ.25ರಂದು ಒಟ್ಟು 193 ಎಕರೆ ಜಾಗವನ್ನು ತೆರವುಗೊಳಿಸಿ, ಶ್ರೀ.ನಿ.ಪ್ರ.ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಕನ್ನಡ ಮಠ ಇವರ ಸ್ವಾಧೀನಕ್ಕೆ ನೀಡುವ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.
ಇದು ಅತೀ ಸೂಕ್ಷ್ಮ ವಿಚಾರವಾಗಿರುವುದರಿಂದ ಮತ್ತು ಈ ಕಾರ್ಯ ನಡೆಸುವಲ್ಲಿ ಸಾರ್ವಜನಿಕ ಪ್ರತಿರೋಧ ವ್ಯಕ್ತವಾಗುವ ಸಂಭವವಿರುವುದರಿಂದ ಸಾರ್ವಜನಿಕ ವಲಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಕ್ಷನ್ 144 ರಡಿ ನ.24ರ ಮಧ್ಯರಾತ್ರಿ 12 ಗಂಟೆಯಿಂದ ನ.25ರ ಮಧ್ಯ ರಾತ್ರಿ 12 ಗಂಟೆಯವರೆಗೆ ವೀರಾಜಪೇಟೆ ತಾಲೂಕು, ಅಮ್ಮತ್ತಿ ಹೋಬಳಿ, ಬೆಟ್ಟಗೇರಿ ಗ್ರಾಮದ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಗೋವಿಂದರಾಜು ಆದೇಶ ಹೊರಡಿಸಿದ್ದಾರೆ.







