ಸೊರಬ: ಮೃತ ಕಾರ್ಮಿಕರ ಕುಟುಂಬಗಳಿಗೆ ನೇರ ಪರಿಹಾರ ಒದಗಿಸಲು ಮನವಿ

ಸೊರಬ, ನ.24: ಅಸಂಘಟಿತ ವಲಯದ ರೈತ ಕೂಲಿ ಕಾರ್ಮಿಕರಿಗೆ ಅವಘಡಗಳು ಸಂಭವಿಸಿದಾಗ ಸರಕಾರ ನೇರ ಪರಿಹಾರ ಘೋಷಿಸಬೇಕು ಹಾಗೂ ಕೃಷಿ ಕಾರ್ಮಿಕರ ಸಾರಿಗೆ ವಾಹನ ಮೇಲೆ ಅತಿಯಾದ ಕಾನೂನು ಹೇರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಕೆಯ ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದ ಗೌಡ ಜೇಡಗೇರಿ ಮಾತನಾಡಿ, ರೈತ ಕೂಲಿ ಕಾರ್ಮಿಕ ಸಮೂಹ ಯಾವುದೇ ಭದ್ರತೆ ಇಲ್ಲದೆ ಜೀವನ ಸಾಗಿಸುವಂತಾಗಿದೆ. ಇತ್ತೀಚೆಗೆ ಸೊರಬ ತಾಲೂಕಿನಲ್ಲಿ ಅವಘಡವೊಂದು ಸಂಭವಿಸಿದ್ದು, ಕೃಷಿ ಚಟುವಟಿಕೆಗೆ ತೆರಳಿ ವಾಪಸಾಗುವ ಸಂದಭರ್ದಲ್ಲಿ ನಾಲ್ಕು ಮಂದಿ ರೈತ ಕೂಲಿ ಕಾರ್ಮಿಕರು ಮೃತಪಟ್ಟಿದ್ದರು. ಅಲ್ಲದೇ ಹಲವರು ಗಂಭೀರ ಸ್ವರೂಪದ ಗಾಯಾಳುಗಳಾಗಿದ್ದರು. ಕೃಷಿ ಕೂಲಿಯನ್ನೇ ನಂಬಿದ ಅವರ ಜೀವನ ಮತ್ತು ಅವಲಂಬಿತ ಕುಟುಂಬಗಳು ಸಂಕಷ್ಟದಲ್ಲಿವೆ. ಕೂಡಲೇ ಸರಕಾರ ಮೃತ ಕೃಷಿ ಕಾರ್ಮಿಕರ ಕುಟುಂಬಕ್ಕೆ ಕನಿಷ್ಠ ಐದು ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದರು.
ಕೂಲಿ ಕಾರ್ಮಿಕರನ್ನು ಕರೆತರುವ ವಾಹನಗಳ ಮೇಲೆ ಅತಿಯಾದ ಕಾನೂನಿನ ಹೇರಿಕೆ ಮಾಡಬಾರದು. ಕೃಷಿ ಕೂಲಿ ಕಾರ್ಮಿಕರನ್ನು ಗುರುತಿಸುವಲ್ಲಿ ಯಾವುದೇ ತಾರತಮ್ಯ ಧೋರಣೆ ತೋರದೆ ಶೀಘ್ರ ಪರಿಹಾರ ವಿತರಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಗೂಡ್ಸ್ ಆಟೊ ಸಂಘದ ಟಿ. ನಿಂಗರಾಜ, ದೇವರಾಜ, ಆರ್.ಟಿ. ಮಹೇಶ, ಅರುಣಕುಮಾರ್, ಎ.ಎಚ್. ಸುರೇಂದ್ರ, ಮೃತ್ಯುಂಜಯ, ದೇವೇಂದ್ರಪ್ಪ ಚನ್ನಾಪುರ, ಕೆ.ಪಿ. ಷಣ್ಮುಖಪ್ಪಮತ್ತಿತರರು ಉಪಸ್ಥಿತರಿದ್ದರು.







