ಆರೋಪಿಗಳ ಬಂಧನಕ್ಕೆ ಸಿಎಫ್‌ಐ ಆಗ್ರಹ
ಮೊಹಮ್ಮದ್ ಅಯಾನ್ ಮೇಲೆ ಹಲ್ಲೆ ಪ್ರಕರಣ
ಶಿವಮೊಗ್ಗ, ನ. 24: ನಗರದ ಅಕ್ಷರ ಕಾಲೇಜು ಕ್ಯಾಂಪಸ್ ಆವರಣದಲ್ಲಿಯೇ ವಿದ್ಯಾರ್ಥಿ ಮೊಹಮ್ಮದ್ ಅಯಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಶುಕ್ರವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.
ಕ್ಷುಲ್ಲಕ ವಿಚಾರವಾಗಿ ಮೊಹಮ್ಮದ್ ಅಯಾನ್ ಮೇಲೆ ಹಲ್ಲೆ ನಡೆಸಿದ್ದು ನಿಜಕ್ಕೂ ಹೇಯ ಕೃತ್ಯವಾಗಿದ್ದು, ಖಂಡನಾರ್ಹವಾದುದಾಗಿದೆ. ಕಾಲೇಜು ಕ್ಯಾಂಪಸ್‌ಗಳಲ್ಲಿ ಈ ರೀತಿಯ ಕೃತ್ಯಗಳು ನಡೆಯುವುದರಿಂದ ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳುತ್ತದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಭಯ ಸೃಷ್ಟಿಯಾಗುತ್ತದೆ ಎಂದು ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ಇತ್ತೀಚೆಗೆ ನಗರದ ಕೆಲ ಕಾಲೇಜುಗಳಲ್ಲಿ ನೈತಿಕ ಪೊಲೀಸ್ ಗಿರಿ ಹಾಗೂ ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದಕ್ಕೆ ಪೊಲೀಸ್ ಇಲಾಖೆ ಹಾಗೂ ಕಾಲೇಜು ಆಡಳಿತ ಮಂಡಗಳಿಗಳು ನೇರ ಕಾರಣವಾಗಿವೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಕಾಲೇಜುಗಳಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸುವವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಕಾಲೇಜು ಆಡಳಿತ ಮಂಡಳಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು ಎಂದು ಸಂಘಟನೆಯ ಮುಖಂಡ ಮಹಮ್ಮದ್ ದಸ್ತಗೀರ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







