ಕಾಳುಮೆಣಸು ಆಮದು ಸಂಪೂರ್ಣ ನಿಷೇಧಕ್ಕೆ ಮನವಿ
ರಾಜ್ಯದ ಬೆಳೆಗಾರರ ನಿಯೋಗ ದಿಲ್ಲಿಯಲ್ಲಿ ಕೇಂದ್ರ ಸಚಿವರ ಭೇಟಿ

ಮಡಿಕೇರಿ,ನ.24: ಭಾರತೀಯ ಕರಿಮೆಣಸಿನ ಬೇಡಿಕೆ ಮತ್ತು ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತಿರುವ ಆಮದು ಕರಿಮೆಣಸಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಕ್ಷಿಣ ಭಾರತದ 16 ವಿವಿಧ ಬೆಳೆಗಾರ ಸಂಘಟನೆಗಳು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಕೇಂದ್ರ ತೋಟಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ ಸಂತೋಷ್ ಸಾರಂಗ್ ಮತ್ತು ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಅನಿತಾ ಕರಣ್ ಅವರಿಗೆ ನವದೆಹಲಿಯಲ್ಲಿ ಮನವಿ ಸಲ್ಲಿಸಿದೆ.
ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವ ಸುರೇಶ್ ಪ್ರಭು ಭರವಸೆ ನೀಡಿದ್ದಾರೆ ಎಂದು ನಿಯೋಗದ ಸಹಸಂಚಾಲಕ ಕೆ.ಕೆ.ವಿಶ್ವನಾಥ್ ತಿಳಿಸಿದ್ದಾರೆ.
ಅವರು ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಪರಿಸರ ಸ್ನೇಹಿ ಮಾದರಿಯಲ್ಲಿ ಬೆಳೆಯುತ್ತಿರುವ ಉತ್ಕೃಷ್ಠ ಗುಣಮಟ್ಟದ ಆರೋಗ್ಯಕರ ಗುಣವುಳ್ಳ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿರುವ ಕಾಳುಮೆಣಸಿನ ಬೇಡಿಕೆಯಲ್ಲಿ ಕುಂಠಿತವಾಗಿ, ಬೆಳೆಗಾರರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನು ಹಾಗೂ ಸಮಸ್ಯೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮ ಮತ್ತು ಸಮಸ್ಯೆ ಪರಿಹಾರಕ್ಕೆ ಸೂಕ್ತ ಹಾಗೂ ನ್ಯಾಯ ಸಮ್ಮತ ಬೇಡಿಕೆಗಳನ್ನು ಸಚಿವರಿಗೆ ಮನವಿಯಲ್ಲಿ ಸಲ್ಲಿಸಲಾಯಿತು ಎಂದು ಹೇಳಿದರು.
ವಿದೇಶಗಳಿಂದ ಭಾರತಕ್ಕೆ ಕಾಳುಮೆಣಸು ಆಮದು ಆಗುತ್ತಿರುವುದರಿಂದಾಗಿ ಆಗುತ್ತಿರುವ ದುಷ್ಪಾರಿಣಾಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದ ನಿಯೋಗವು, ವಿಯಟ್ನಾಂ ಮತ್ತಿತರ ದೇಶಗಳಿಂದ ಕಳಪೆ ಗುಣಮಟ್ಟದ ಕಾಳು ಮೆಣಸು ಆಮದಾಗುತ್ತಿದ್ದು, ಭಾರತದಿಂದ ವಿದೇಶಗಳಿಗೆ ಪುನಃ ರಪ್ತಾಗುತ್ತಿದ್ದು ಭಾರತದ ಉತ್ಕೃಷ್ಠ ಗುಣಮಟ್ಟದ ಕಾಳುಮೆಣಸಿನ ಬೆಲೆ ಮತ್ತು ಬೇಡಿಕೆ ಇಳಿಮುಖಗೊಂಡಿದೆ. ವರ್ತಕರಿಗೆ ರಪ್ತು ಮತ್ತು ಆಮದು ತೆರಿಗೆಯನ್ನು ಸರಕಾರ ಮರುಪಾವತಿ ಮಾಡಬೇಕಾಗಿರುವುದರಿಂದ ಹಾಗೂ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ ದೇಶದ ಬೊಕ್ಕಸಕ್ಕೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ವಿಯಾಟ್ನಾಂ ಮತ್ತಿತರ ದೇಶಗಳಿಂದ ಕಾಳುಮೆಣಸು ಆಮದು ಮಾಡಿಕೊಳ್ಳುತ್ತಿರುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಮನವಿ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ 16 ಬೆಳೆಗಾರ ಸಂಘಟನೆಗಳನ್ನು ಪ್ರತಿನಿದಿಸಿದ್ದ ನಿಯೋಗದಲ್ಲಿ ಸಂಚಾಲಕ ಕೊಂಕೋಡಿ ಪದ್ಮನಾಭ, ಸಹಸಂಚಾಲಕ ಕೆ.ಕೆ.ವಿಶ್ವನಾಥ್, ಕರ್ನಾಟಕ ಬೆಳೆಗಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತೀರ್ಥಮಲ್ಲೇಶ್, ಕ್ಯಾಂಪ್ಕೋ ಉಪಾಧ್ಯಕ್ಷ ಕಂಡಿಗೆ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನ ಪ್ರದೀಪ್ ಪೂವಯ್ಯ, ಬ್ಲಾಕ್ ಗೋಲ್ಡ್ ಲೀಗ್‌ನ ಬಿ.ಎಸ್.ವಿವೇಕ್ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.







