ವಿಧೇಯಕದಲ್ಲಿ ಯಾವುದೇ ರಾಜೀ ಮಾಡಿಕೊಂಡಿಲ್ಲ: ರಮೇಶ್ ಕುಮಾರ್

ಮಂಡ್ಯ, ನ.24: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ(ಕೆಪಿಎಂಇ)ಕ್ಕೆ ಮೊದಲು ಇಲ್ಲದ ಕೆಲವು ಅಂಶಗಳನ್ನು ಹೊಸದಾಗಿ ಸೇರಿಸಲಾಗಿದೆಯೇ ಹೊರತು ಯಾವುದೇ ರಾಜೀ ಮಾಡಿಕೊಂಡಿಲ್ಲ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಮೊದಲನೆಯದಾಗಿ ಜಾರಿಗೆ ಬಂದಿರುವ ವಿಧೇಯಕ ನನಗೆ ತೃಪ್ತಿ ತಂದಿದೆ. ಆದರೆ, ವಿಧೇಯಕ ಓದದೇ ಕೆಲವರು ಟೀಕಿಸುತ್ತಾರೆ ಎಂದರು.
ವೈದ್ಯರ ವಿರುದ್ಧ ದೂರು ಕೊಡುವ ವೇದಿಕೆಯನ್ನು ಮತ್ತಷ್ಟು ಭದ್ರಗೊಳಿಸಲಾಗಿದೆ. ದೂರು ಕೊಟ್ಟ ಮೇಲೆ ಮೂರು ಹಂತದಲ್ಲಿ ತನಿಖೆ ನಡೆಸಲಾಗುವುದು. ಪರಿಣಿತರ ಮೂಲಕ ನಿಗದಿಯಾದ ಚಿಕಿತ್ಸಾ ದರಪಟ್ಟಿಯನ್ನು ಎಲ್ಲ ಆಸ್ಪತ್ರೆಗಳಲ್ಲಿ ಪ್ರದರ್ಶಿಸಬೇಕು ಎಂದು ಅವರು ವಿವರಿಸಿದರು.
ವಿಧೇಯಕದ ಬಗ್ಗೆ ವೈದ್ಯರು ಆತಂಕಪಡುವ ಅಗತ್ಯವಿಲ್ಲ. ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವುದು ಮತ್ತು ರೋಗಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನುವುದು ಕಾಯ್ದೆಯ ಉದ್ದೇಶ. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಎಲ್ಲ ಕೆಲಸಗಳಿಗೆ ಜತೆಯಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕರ್ತವ್ಯ ಮತ್ತು ಕೆಡಿಪಿ ಸಭೆಗಳಿಗೆ ಗೈರಾಗುತ್ತಿರುವ ಬಗ್ಗೆ ದೂರು ಬಂದಿಲ್ಲ. ದೂರು ಬಂದರೆ, ಯಾವ ಮೂಲಾಜಿಗೂ ಒಳಗಾಗದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ರಾಜ್ಯ ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ವಿಫಲವಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ರಮೇಶ್‍ಕುಮಾರ್, ಚರ್ಚೆ ನಾವು ಮಾಡೋದಲ್ಲ, ಅವರು ಮಾಡೋ ಚರ್ಚೆಗೆ ಉತ್ತರ ಕೊಡೋದಷ್ಟೇ ನಮ್ಮ ಕೆಲಸ. ನಾವು ನಮ್ಮ ಕೈಲಾಗಿದ್ದನ್ನು ಮಾಡಿದ್ದೇವೆ, ಮುಂದೆ ಅವರು ಬಂದಾಗ ನೋಡೋಣ ಎಂದು ತಿರುಗೇಟು ನೀಡಿದರು.
ಮುಂದೆಯೂ ಕಾಂಗ್ರಸ್ ಅಧಿಕಾರಕ್ಕೆ ಬರುತ್ತೆ. ಆದರೆ, ಎಷ್ಟು ಸೀಟು ಬರುತ್ತೆ ಅಂತ ಹೇಳೋಕೆ ನಾನು ಜ್ಯೋತಿಷಿ ಅಲ್ಲ. ಕಳೆದ ನಾಲ್ಕೂವರೆ ವರ್ಷದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಜನರಿಗೆ ಉತ್ತಮ ಕಾರ್ಯಕ್ರಮ ಕೊಟ್ಟಿದ್ದೇವೆ. ಆದ್ದರಿಂದ ಜನರು ಕೈ ಹಿಡಿಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅವರ ಕಾಂಗ್ರೆಸ್, ಇವರ ಕಾಂಗ್ರೆಸ್ ಎಂಬುದಾಗಿ ಇಲ್ಲ. ಇರುವುದು ಒಂದೇ ಕಾಂಗ್ರೆಸ್. ಒಂದು ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆದ್ದುಬಿಟ್ಟ ಮಾತ್ರಕ್ಕೆ ಕಾಂಗ್ರೆಸ್ ಪಕ್ಷ ಕಟ್ಟಿಬಿಡುತ್ತಾರ. ಈ ರೀತಿಯ ಭ್ರಮೆಯಲ್ಲಿರುವವರು ದೇಶದಲ್ಲಿ ಬಹಳಷ್ಟಿದ್ದಾರೆ ಎಂದು ವರ್ತೂರು ಪ್ರಕಾಶ್ ಹೇಳಿಕೆಗೆ ರಮೇಶ್‍ಕುಮಾರ್ ಪ್ರತಿಕ್ರಿಯಿಸಿದರು.







