ಬಾಲಕಿ ಅಪಹರಣ: ಶಿಕ್ಷಕಿ ವಿರುದ್ಧ ದೂರು
ಮಂಡ್ಯ, ನ.24: ಟ್ಯೂಷನ್ ಹೇಳಲು ಬಂದಿದ್ದ ಶಿಕ್ಷಕಿ 13 ವರ್ಷದ ಬಾಲಕಿಯನ್ನು ಅಪಹರಣ ಮಾಡಿರುವ ಪ್ರಕರಣ ತಾಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಮಕ್ಕಳಿಗೆ ಇಂಗ್ಲೀಷ್ ಪಾಠ ಹೇಳಿಕೊಡಲು ಗ್ರಾಮಕ್ಕೆ ಆಗಮಿಸಿದ್ದ ಕನಕಪುರದ ಪೂಜಾ ಎಂಬಾಕೆ ಪಾಠಕ್ಕೆ ಬರುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಹೋಗಿ ಬರೋಣವೆಂದು ನ.19 ರಂದು ಕರೆದುಕೊಂಡು ಓದವಳು ಮತ್ತೆ ಬಂದಿಲ್ಲ ಎಂದು ದೂರು ನೀಡಲಾಗಿದೆ.
ಅಪಹರಣ ಆಗಿರುವ ಬಾಲಕಿ ತಂದೆ ತಾಯಿ ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯೋಗದಲ್ಲಿದ್ದು, ಬಾಲಕಿ ಮತ್ತು ಆಕೆಯ ತಮ್ಮ ಕೀಲಾರ ಗ್ರಾಮದ ಅಜ್ಜಿ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ.
ಕನಕಪುರದವಳೆಂದು ಹೇಳಿಕೊಂಡು ಕೀಲಾರ ಗ್ರಾಮಕ್ಕೆ ಆಗಮಿಸಿ ಇಂಗ್ಲೀಷ್ ಟ್ಯೂಷನ್ ಹೇಳಿಕೊಡುತ್ತಿದ್ದ ಪೂಜಾಳ ಭಾವಚಿತ್ರವಾಗಲೀ, ಆಕೆಯ ವಿಳಾಸವಾಗಲಿ ಗ್ರಾಮಸ್ಥರು ಪಡೆದಿಲ್ಲವೆಂದು ತಿಳಿದು ಬಂದಿದೆ.
ಶಿಕ್ಷಕಿ ಪೂಜಾ ಜತೆ ಯೋಗೇಶ್ ಮತ್ತು ಸುನೀಲ್ ಎಂಬ ಯುವಕರಿದ್ದು, ಅವರೂ ಬಾಲಕಿ ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿರಬಹುದೆಂದು ಹೇಳಲಾಗಿದೆ. ಕೆರಗೋಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಕ್ಷಕಿ ಪತ್ತೆಗೆ ಬಲೆಬೀಸಿದ್ದಾರೆ.





