ಮೂವರು ಅಂತರ್ ಜಿಲ್ಲಾ ಕಳ್ಳರ ಬಂಧನ: 40 ಲಕ್ಷ ರೂ. ಮೌಲ್ಯದ ನಗನಾಣ್ಯ ವಶಕ್ಕೆ
ಶಿವಮೊಗ್ಗ, ನ. 24: ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆ ಇನ್ ಸ್ಪೆಕ್ಟರ್ ಹರೀಶ್ ಕೆ. ಪಾಟೀಲ್ ನೇತೃತ್ವದ ಪೊಲೀಸ್ ತಂಡ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರ ಸೆರೆ ಬಂಧಿಸಲಾಗಿದ್ದು, ಬಂಧಿತರಿಂದ ನಗನಾಣ್ಯ ಸೇರಿದಂತೆ ಸರಿಸುಮಾರು 40 ಲಕ್ಷ ರೂ. ಮೌಲ್ಯದ ಕಳವು ಮಾಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರಿನ ನಿವಾಸಿ ಮುಹಿಬುಲ್ಲಾ ಅಲಿಯಾಸ್ ಮುದಾಸೀರ್ (30), ಕಡೂರಿನ ತಬ್ರೇಜ್ ಅಹ್ಮದ್ (37) ಹಾಗೂ ಬೆಂಗಳೂರಿನ ಆರ್. ಟಿ. ನಗರದ ಅಹ್ಮದ್ ಕಬೀರ್ (32) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದ್ದು, ಇವರಿಂದ ಕಳವು ಮಾಲು ಖರೀದಿಸಿದ್ದ ಆಲ್ದೂರಿನ ಅಬ್ದುಲ್ ಜಾವೀದ್, ಬೀರೂರಿನ ಇಮ್ರಾನ್ ಅಹ್ಮದ್, ಚಿತ್ರದುರ್ಗ ಜಿಲ್ಲೆ ಕುರುಬರಹಳ್ಳಿಯ ಮೊಹಮ್ಮದ್ ಮಝರುಲ್ಲಾ, ಸೈಯದ್ ಸಲೀಂ ಹಾಗೂ ಕಡೂರಿನ ನಿಡುಘಟ್ಟಾ ಗ್ರಾಮದ ಗುಲ್ನಾರ್ ಶಿರೀನ್ ಎಂಬುವರನ್ನು ಬಂಧಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರಿಂದ 37.46 ಲಕ್ಷ ರೂ. ಮೌಲ್ಯದ ಒಂದು ಕೆಜಿ 472 ಗ್ರಾಂನ ಬಂಗಾರದ ಒಡವೆಗಳು, 1800 ರೂ. ಮೌಲ್ಯದ ಬೆಳ್ಳಿಯ ನಾಣ್ಯ, 30 ಸಾವಿರ ರೂ. ಮೌಲ್ಯದ ಓನಿಡಾ ಎಲ್‍ಇಡಿ ಟಿವಿ, 80 ಸಾವಿರ ರೂ. ಮೌಲ್ಯದ ಇಂಡಿಕಾ ಕಾರು, 30 ಸಾವಿರ ರೂ. ಮೌಲ್ಯದ ಒಂದು ಕಬ್ಬಿಣದ ಟ್ರೆಜರಿ ಮತ್ತು 1.90 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟಾರೆ ಮೌಲ್ಯ 40,78,300 ರೂ.ಗಳಾಗಿದೆ. ಆರೋಪಿಗಳು ತಿಪಟೂರಿನಲ್ಲಿ ಮೂರು, ಹಾಸನ ನಗರದಲ್ಲಿ ಐದು ಮತ್ತು ಚಿಕ್ಕಮಗಳೂರು ನಗರದಲ್ಲಿ ಒಂದು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ತಂಡದ ಇನ್ನೋರ್ವ ಸದಸ್ಯ ಕಡೂರಿನ ಸಾದಿಕ್ ತಲೆಮರೆಸಿಕೊಂಡಿದ್ದಾನೆ. ಈತನ ಮೇಲೆ ರಾಜ್ಯದ ವಿವಿಧೆಡೆ ಹಲವಾರು ಕಳ್ಳತನದ ಕೇಸುಗಳು ದಾಖಲಾಗಿವೆ. ಆದರೆ ಈತ ಮುಂಬೈ, ಅನಂತಪುರ, ಬೆಂಗಳೂರು ಮೊದಲಾದೆಡೆ ಓಡಾಡಿಕೊಂಡಿದ್ದಾನೆ. ಈತನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಶಿವಮೊಗ್ಗದ ವಿನೋಬನಗರ ಠಾಣೆ ವ್ಯಾಪ್ತಿಯ ಐದು, ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಮೂರು, ತುಂಗಾನಗರ ಮತ್ತು ಜಯನಗರದ ಠಾಣೆ ವ್ಯಾಪ್ತಿಯ ತಲಾ ಎರಡು, ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಠಾಣೆ ವ್ಯಾಪ್ತಿಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳು ಪತ್ತೆಯಾಗಿವೆ ಎಂದರು.
ಎಪಿಎಂಸಿ ಎದುರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಈ ಮೂವರು ಕಳ್ಳರನ್ನು ವಶಕ್ಕೆ ಪಡೆಯಲಾಗಿದೆ. ಇವರ ತಂಡದ ನಾಯಕ ಬೆಂಗಳೂರಿನ ಯಶವಂತಪುರದ ಬಾಬ್ಜಾನ್ (26) ಎನ್ನುವವನನ್ನು ಕಳೆದ ವರ್ಷವೇ ಬಂಧಿಸಲಾಗಿದ್ದು, ಆತನಿಂದ ಕಳ್ಳತನದ ಹಾಗೂ ಆತನ ಸಹಚರರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲಾಗಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ಮುತ್ತುರಾಜ್, ಡಿವೈಎಸ್‍ಪಿ ಪಿ.ಎಸ್. ಸುದರ್ಶನ್, ದೊಡ್ಡಪೇಟೆ ಸಿಪಿಐ ಹರೀಶ್‍ಪಾಟೀಲ್, ಸಬ್‍ಇನ್ಸ್‍ಪೆಕ್ಟರ್ ಮೊದಲಾದವರಿದ್ದರು.









