ಮೊದಲ ಆ್ಯಶಸ್ ಟೆಸ್ಟ್: ಆಸ್ಟ್ರೇಲಿಯಕ್ಕೆ ಸ್ಮಿತ್ ಆಸರೆ
ಇಂಗ್ಲೆಂಡ್ 302ಕ್ಕೆ ಆಲೌಟ್: ಆಸೀಸ್ 165/4

ಬ್ರಿಸ್ಬೇನ್, ನ.24: ಇಂಗ್ಲೆಂಡ್ ವಿರುದ್ಧ ಮೊದಲ ಆ್ಯಶಸ್ ಟೆಸ್ಟ್ ನಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕುಸಿತಕ್ಕೊಳಗಾದ ಆಸ್ಟ್ರೇಲಿಯಕ್ಕೆ ನಾಯಕ ಸ್ಟೀವನ್ ಸ್ಮಿತ್ ಆಸರೆಯಾಗಿದ್ದಾರೆ.
ಇಲ್ಲಿನ ಗಾಬಾ ಕ್ರಿಕೆಟ್ ಸ್ಟೇಡಿಯಂನಲ್ಲಿ 2ನೆ ದಿನವಾದ ಶುಕ್ರವಾರ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 302 ರನ್ ಗಳಿಸಿ ಆಲೌಟಾಯಿತು. ಇಂಗ್ಲೆಂಡ್ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ಆಸ್ಟ್ರೇಲಿಯ 76 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಮಿತ್ ಹಾಗೂ ಶಾನ್ ಮಾರ್ಷ್ (ಅಜೇಯ 44)5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 89 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಆಸೀಸ್ 2ನೇ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿತು.
ಆಸ್ಟ್ರೇಲಿಯ 25ನೇ ಓವರ್‌ನೊಳಗೆ ಡೇವಿಡ್ ವಾರ್ನರ್(26) , ಉಸ್ಮಾನ್ ಖ್ವಾಜಾ(11), ಕ್ಯಾಮರೂನ್ ಬ್ಯಾಂಕ್ರಾಫ್ಟ್(05) ಹಾಗೂ ಹ್ಯಾಂಡ್ಸ್‌ಕಾಂಬ್(14)ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆಗ ತಂಡವನ್ನು ಆಧರಿಸಿದ ಸ್ಮಿತ್ 148 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಅಜೇಯ 64 ರನ್ ಗಳಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಫಿಟ್‌ನೆಸ್ ಟೆಸ್ಟ್ ನಲ್ಲಿ ಪಾಸಾಗಿ ಆಡುವ 11ರ ಬಳಗ ಸೇರಿದ ವಾರ್ನರ್ ಚೊಚ್ಚಲ ಟೆಸ್ಟ್ ಪಂದ್ಯ ಆಡಿರುವ ಬ್ಯಾಂಕ್ರಾಫ್ಟ್ಟ್‌ರೊಂದಿಗೆ ಇನಿಂಗ್ಸ್ ಆರಂಭಿಸಿದರು. ಇದೇ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ ಬ್ಯಾಂಕ್ರಾಫ್ಟ್ ಕೇವಲ 5 ರನ್ ಗಳಿಸಿ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದರು. ಉಸ್ಮಾನ್ ಖ್ವಾಜಾ(26) ಸ್ಪಿನ್ನರ್ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಖ್ವಾಜಾ 42 ಟೆಸ್ಟ್ ಇನಿಂಗ್ಸ್‌ಗಳಲ್ಲಿ 17ನೇ ಬಾರಿ ಸ್ಪಿನ್ನರ್‌ಗೆ ವಿಕೆಟ್ ಒಪ್ಪಿಸಿದರು.
►ಇಂಗ್ಲೆಂಡ್ 302 ರನ್‌ಗೆ ಆಲೌಟ್
ಇದಕ್ಕೆ ಮೊದಲು ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 246 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ನಿನ್ನೆಯ ಮೊತ್ತಕ್ಕೆ 56 ರನ್ ಸೇರಿಸುವಷ್ಟರಲ್ಲಿ 302 ರನ್‌ಗೆ ಆಲೌಟಾಯಿತು.
ಡೇವಿಡ್ ಮಲಾನ್ 56 ರನ್(130 ಎಸೆತ,11 ಬೌಂಡರಿ)ಹಾಗೂ ಮೊಯಿನ್ ಅಲಿ(38)5ನೇ ವಿಕೆಟ್‌ಗೆ 89 ರನ್ ಜೊತೆಯಾಟ ನಡೆಸಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸುವ ವಿಶ್ವಾಸ ಮೂಡಿಸಿದ್ದರು. ಆದರೆ, ವೇಗಿ ಮಿಚೆಲ್ ಸ್ಟಾರ್ಕ್ ಅವರು 3ನೇ ಅರ್ಧಶತಕ ಸಿಡಿಸಿದ ಮಲಾನ್ ವಿಕೆಟ್ ಕಬಳಿಸಿ ಈ ಜೋಡಿ ಬೇರ್ಪಡಿಸಿದರು. 104ನೇ ಓವರ್‌ನಲ್ಲಿ ಆಲ್‌ರೌಂಡರ್ ಅಲಿ ವಿಕೆಟ್ ಕಬಳಿಸಿದ ಲಿಯೊನ್ ಇಂಗ್ಲೆಂಡ್ ಸಂಕಷ್ಟ ಹೆಚ್ಚಿಸಿದರು. ವಿಕೆಟ್‌ಕೀಪರ್ ಬೈರ್‌ಸ್ಟೋ(9) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.ಆನಂತರ ಇಂಗ್ಲೆಂಡ್ ಕುಸಿತದ ಹಾದಿ ಹಿಡಿಯಿತು. ಆಸ್ಟ್ರೇಲಿಯದ ಪರ ಸ್ಟಾರ್ಕ್(3-77), ಕಮ್ಮಿನ್ಸ್(3-85) ಹಾಗೂ ನಥಾನ್ ಲಿಯೊನ್(2-78)8 ವಿಕೆಟ್‌ಗಳನ್ನು ಹಂಚಿಕೊಂಡರು.







