ಸಮ್ಮೇಳನಗಳಲ್ಲಿ ಚರ್ಚಿತ ವಿಷಯ ಸಮಾಜದ ಅಭಿವೃದ್ಧಿಗೆ ಪೂರಕ: ಡಾ.ವಿಜಯಮಾಲಾ ರಂಗನಾಥ್

ಮೈಸೂರು, ನ.25: ಸಮ್ಮೇಳನಗಳ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಗಂಭೀರ ವಿಚಾರಗಳು ಮಂಡನೆಯಾಗುತ್ತವೆ. ಅವನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವುದು ಸಾಧ್ಯ ಎಂದು ಲೇಖಕಿ ಬೆಂಗಳೂರಿನ ವಿಜಯಮಾಲಾ ರಂಗನಾಥ ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳು ನಿರೀಕ್ಷೆ ಮಟ್ಟದಲ್ಲಿ ಜಾರಿಗೊಳ್ಳದಿದ್ದರೂ ಆಶಾದಾಯಕವಾಗಿಯೇ ಇವೆ. ಮುಂದಿನ ಸಮ್ಮೇಳನಗಳು ಇನ್ನಷ್ಟು ಆಶಾದಾಯಕವಾಗಿ ಮೂಡಿಬರುವ ಸಾಧ್ಯತೆಗಳಿವೆ ಎಂದರು.
ಕನ್ನಡ ಪರ ಹೋರಾಟಗಾರರು, ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಆ ಮೂಲಕ ಆ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು. ಆದರೆ, ಹಲವಾರು ಸಾಹಿತಿಗಳು, ಕನ್ನಡ ಚಳವಳಿಗಾರರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಯುವಜನಾಂಗಕ್ಕೆ ಕನ್ನಡ ಸಾಹಿತ್ಯ, ನೆಲ, ಜಲ, ಸಂಸ್ಕತಿ ಬಗ್ಗೆ ಆಸಕ್ತಿ ಮೂಡಿಸುವ ಅಗತ್ಯವಿದೆ. ಸಮ್ಮೇಳನಗಳಲ್ಲಿ ಬಿಳಿತಲೆ(ವಯಸ್ಸಾದ ನಾಗರಿಕರು)ಯವರೇ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. ಯುವ ಸಮೂಹ ಮೊಬೈಲ್, ಅಂತರ್ಜಾಲಗಳಲ್ಲಿ ಮುಳುಗಿ ಹೋಗಿದೆ. ಅವರನ್ನು ಅದರಿಂದ ಹೊರತಂದು ಮಾತೃಭಾಷೆಯನ್ನು ಕಟ್ಟುವ ಚಿಂತನೆಯನ್ನು ಬೆಳೆಸಬೇಕು ಎಂದರು.





