ಉಡುಪಿ: ಧರ್ಮ ಸಂಸದ್ ನಿರ್ಣಯಗಳು
ಉಡುಪಿ, ನ.25: ವಿಶ್ವ ಹಿಂದು ಪರಿಷತ್ ವತಿಯಿಂದ ನಡೆದಿರುವ ಧರ್ಮ ಸಂಸದ್‌ನಲ್ಲಿ ಎರಡನೇ ದಿನದ ಗೋಷ್ಠಿಯ ಕೊನೆಗೆ ಸಂತ ಮಂಡಳಿ ತೆಗೆದು ಕೊಂಡ ನಿರ್ಣಯಗಳಲ್ಲಿ ಅಸ್ಪೃಶ್ಯಮುಕ್ತ, ಸಾಮರಸ್ಯಯುಕ್ತ ಭಾರತ, ಸಮೃದ್ಧ, ಸಶಕ್ತ ಹಿಂದೂ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯ ಯೋಜನೆಯನ್ನು ಘೋಷಿಸಸಲಾಗಿದೆ.
ಹಿಂದೂ ಧರ್ಮದಲ್ಲಿ ಮೇಲು-ಕೀಳು, ಅಸ್ಪಶ್ಯತೆಗೆ ಅವಕಾಶವಿಲ್ಲ. ಎಲ್ಲಾ ಬಗೆಯ ಅಸ್ಪಶ್ಯತೆಯನ್ನು ವಿಚಾರ ಹಾಗೂ ವ್ಯವಹಾರದಿಂದ ಕೊನೆಗೊಳಿಸಬೇಕು. ಹಿಂದೂ ಧರ್ಮದಲ್ಲಿ ಹುಟ್ಟಿದ ಎಲ್ಲರು ಬಂಧು ಎಂಬ ನಿರ್ಣಯ ಸಂತರು ಹಾಗೂ ಸ್ವಾಮೀಜಿಗಳಿಂದ ಆಗಿದೆ. ಈ ಎಲ್ಲಾ ನಿರ್ಣಯಗಳನ್ನು ಕಾರ್ಯಗತಗೊಳಿಸಿ ಸಮೃದ್ಧ ಭಾರತದ ಸಂಕಲ್ಪ ಮಾಡಲಾಗಿದೆ ಎಂದು ಧರ್ಮ ಸಂಸದ್‌ನಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರ್ಣಯಗಳು
1. ಎಲ್ಲಾ ದೇವಾಲಯಗಳ, ಮನೆಗಳ ಹಾಗು ಸಂಸ್ಥೆಗಳ ಬಾಗಿಲುಗಳು ಎಲ್ಲಾ ಹಿಂದೂ ಸಮಾಜ ಬಂಧುಗಳಿಗೆ ಸದಾ ತೆರೆದಿರಬೇಕು.
2. ದೇವಾಲಯಗಳಲ್ಲಿ ಹಿಂದೂ ಸಮಾಜದ ಎಲ್ಲಾ ವರ್ಗದವರಿಗೆ ಮುಕ್ತ ಪ್ರವೇಶ ವಿರಬೇಕು.
3. ಹಳ್ಳಿಗಳ ಸ್ಮಶಾನ, ಬಾವಿಗಳು, ಕೆರೆಗಳು ಎಲ್ಲಾ ಬಾಂಧವರಿಗೂ ಸಮಾನವಾಗಿ ದೊರಕಬೇಕು.
4. ಮಹಾಪುರುಷರು, ಸ್ವಾಮಿಜಿಗಳು ಇರುವುದು ಜಾತಿಗಲ್ಲ ಇಡೀ ರಾಷ್ಟ್ರಕ್ಕಾಗಿ. ನಮ್ಮ ದೇಶದ ಎಲ್ಲಾ ಮಹಾಪುರುಷರ ಜಯಂತಿ ಹಾಗು ಪುಣ್ಯತಿಥಿಗಳನ್ನು ಆಚರಿಸಬೇಕು.
5. ಹಿಂದೂ ಸಮಾಜದ ಅನುಸೂಚಿತ ಜಾತಿವರ್ಗದವರನ್ನು ಮಿತ್ರರನ್ನಾಗಿಸಿಕೊಂಡು ಅವರ ಜೊತೆ ಆತ್ಮೀಯತೆಯಿಂದ ವ್ಯವಹರಿಸಬೇಕು.
6. ಯಾವುದಾದರು ಒಂದು ಅಷ್ಟಮಿಯ ದಿನ ಅನುಸೂಚಿತ ಜಾತಿಯ ಹಾಗೂ ಎಲ್ಲಾ ವರ್ಗಗಳ ಬಾಲಕಿಯರನ್ನು ಮನೆಗೆ ಆಮಂತ್ರಿಸಿ ಕನ್ಯಾ ಪೂಜೆ (ಪಾದಪೂಜೆ) ಮಾಡಬೇಕು.
7. ಸಂತ-ಸ್ವಾಮಿಜಿಗಳಲ್ಲಿ ವಿನಂತಿ ಏನೆಂದರೆ ಹಿಂದುಳಿದ ವರ್ಗದವರ ಮನೆಗಳಲ್ಲಿ, ಊರುಗಳಲ್ಲಿ, ಪಾದಯಾತ್ರೆ, ಪ್ರವಚನ, ಭಜನೆ ಮಾಡಬೇಕು. ಸಮಾಜದಲ್ಲಿ ಸಮರಸತೆ ಸಾರಬೇಕು.
8. ವಿಧರ್ಮಿಯರಿಂದ ಹಿಂದೂ ಸಮಾಜದ ಯಾವುದೆ ಭಾಗಕ್ಕೆ ಧಕ್ಕೆ ಬಂದರೂ ಅದರ ವಿರುದ್ಧ ಸಂಪೂರ್ಣ ಹಿಂದೂ ಸಮಾಜ ಒಟ್ಟಾಗಿ ತನ್ನ ಶಕ್ತಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಬೇಕು.







