ಮಕ್ಕಳನ್ನು ದೇಶದ ಸಂರಕ್ಷಣೆಗೆ ರೂಪಿಸಲು ಶಿಕ್ಷಕರು, ಪೋಷಕರು ಮುಂದಾಗಬೇಕು: ಬೋಳುವಾರು ಮೊಹಮ್ಮದ್ ಕುಂಞಿ
.jpg)
ಮೈಸೂರು, ನ.25: ಮಕ್ಕಳನ್ನು ದೇಶದ ಸಂರಕ್ಷಣೆಗೆ ರೂಪಿಸುವತ್ತ ಶಿಕ್ಷಕರು ಹಾಗೂ ಪೋಷಕರು ಮುಂದಾಗಬೇಕೆಂದು ಬೋಳುವಾರು ಮೊಹಮ್ಮದ್ ಕುಞಿ ಕರೆ ನಿಡಿದ್ದಾರೆ.
ಕಲಾಮಂದಿರದ ಸಮಾನಾಂತರ ವೇದಿಕೆಯ ಮುಳ್ಳೂರು ನಾಗರಾಜ ವೇದಿಕೆಯಲ್ಲಿ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಸಾಹಿತ್ಯ ಗೋಷ್ಠಿಯ ಆಶಯ ನುಡಿಯಲ್ಲಿ ಆಧುನಿಕತೆ ಸವಾಲುಗಳ ವಿಷಯ ಮಂಡಿಸಿ ಮಾತನಾಡಿದರು.
ಇಂದು ಮಕ್ಕಳ ಸಾಹಿತ್ಯವು ಪ್ರಚಲಿತ ವಿದ್ಯಮಾನದಲ್ಲಿ ಪೋಷಿಸುತ್ತಿರುವುದು ಸಂತಸದ ಸಂಗತಿ. ಮಕ್ಕಳಲ್ಲಿರುವ ಭಾವನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ವಿಷಾದವ್ಯಕ್ತಪಡಿಸಿದರು.
ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಭಾವನೆಗಳು ಸಾಹಿತ್ಯ ರೂಪದಲ್ಲಿ ಹೊರ ಹೊಮ್ಮುತ್ತಿವೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ನೂರಾರು ಸಾಹಿತ್ಯ ದಿಗ್ಗಜರ ಪರಿಕಲ್ಪನೆಯ ಸಾರಾಂಶವನ್ನು ತಮ್ಮದೇ ಆದ ಬರವಣಿಗೆ ಮೂಲಕ ಬಿಂಬಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಪುರಾಣ, ಪಂಚತಂತ್ರ ಕಥೆಗಳು, ದೇವರ ಕಥೆಗಳು, ಅಕ್ಬರ್ ಆಲಿ ಕಥೆಗಳು ಸೇರಿದಂತೆ ಅನೇಕ ಐತಿಹಾಸಿಕ ಕಥೆಗಳನ್ನು ಹೇಳಿಕೊಡುತ್ತಾ ಬೆಳೆಸುತ್ತೇವಾದರೂ ಅದಾವುದೂ ಮಕ್ಕಳ ಸಾಹಿತ್ಯವಲ್ಲ ಎಂದವರು, ಮಕ್ಕಳ ಮನಸ್ಸಲ್ಲಿರುವ ಪದ ಪುಂಜಗಳು ಅಕ್ಷರಗಳಾಗಿ ಹೊರ ಹೊಮ್ಮಿ, ಸಾಹಿತ್ಯಗಳಾಗಿ ರೂಪುಗೊಳ್ಳುತ್ತವೆ. ಆದರೆ, ದೇವರುಗಳ ಹೆಸರನ್ನು ಹೇಳಿ ಮಕ್ಕಳನ್ನು ಹಾಳು ಮಾಡುವ ಬದಲು ಸಮಾಜವನ್ನು ತಿದ್ದುವ ಸಾಮರಸ್ಯ ಬೆಳೆಸುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕೆಂದರು.
ಶಿವರಾಂ ಕಾರಂತರು ಹೇಳಿದ ಹಾಗೆ ನಮ್ಮ ನಾಡು, ನುಡಿ ಬಿಂಬಿಸುವ ಜೈ ಕರ್ನಾಟಕ ಮಾತೆ ನಮ್ಮ ಭವ್ಯ ಭಾರತದ ಪರಂಪರೆ, ಸಮಾನತೆ, ಭದ್ರತೆಯನ್ನು ಬಿಂಬಿಸುವ ವಂದೇ ಮಾತರಂ ಎಂಬ ದೇಶದ ನುಡಿಗಳನ್ನು ಮಕ್ಕಳ ಮನಸಲ್ಲಿ ತುಂಬಬೇಕು. ಅವರಿಗೆ ಯಾವ ವಿಧವಾದ ಕಂಠಪಾಠವನ್ನು ಮಾಡದಂತೆ ತಿಳಿ ಹೇಳಬೇಕು. ನಮಗಿಂತ ಸಮಾಜ ದೊಡ್ಡದು. ಸಮಾಜಕ್ಕಿಂತ ನಾಡು ದೊಡ್ಡದು, ನಾಡಿಗಿಂತ ದೇಶ ದೊಡ್ಡದು ಎಂಬ ಪರಿಕಲ್ಪನೆಯನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರಿಸಿ ದೇಶದ ಸಂರಕ್ಷಣೆಗೆ ಇಂದಿನಿಂದಲೇ ತಯಾರು ಮಾಡುವ ದಿಸೆಯಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಗೋಷ್ಠಿಯಲ್ಲಿ ಜಯವಂತ ಕಾಡದೇವರ ಅಧ್ಯಕ್ಷತೆಯಲ್ಲಿ ಪ್ರೊ.ಚಂದ್ರಗೌಡ ಕುಲಕರ್ಣಿ, ಕುಮಾರಿ ಸಾನಿಯಾ ಧನ್ನೂರ, ಕುಮಾರ ಅಂತ:ಕರಣ, ಫ.ಗು.ಸಿದ್ದಾಪೂರ ವಿಷಯ ಮಂಡಿಸಿದರು.







