ಅಕ್ರಮ ಮರ ಸಾಗಟ: ಓರ್ವ ಬಂಧನ

ಶಿಕಾರಿಪುರ, ನ.25: ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಬೆಲೆಬಾಳುವ ಬೀಟೆ ಹಾಗೂ ಸಾಗುವಾನಿ ಮರದ ತುಂಡನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸಂಜೆ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ನಳ್ಳಿನಕೊಪ್ಪ ಹಾಗೂ ಗೊಗ್ಗ ಗ್ರಾಮದ ಮಧ್ಯದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ಅನುಮಾನಾಸ್ಪದವಾಗಿ ವೇಗವಾಗಿ ಸಾಗುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ ವಾಹನವನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದಾಗ ವಾಹನದಲ್ಲಿ ಲಕ್ಷ ಬೆಲೆಬಾಳುವ ಬೀಟೆ ಹಾಗೂ ಸಾಗುವಾನಿ ತುಂಡುಗಳು ಪತ್ತೆಯಾದವು.
ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಆರೋಪಿ ತಾಲೂಕಿನ ಚೌಡಿಹಳ್ಳಿ ಗ್ರಾಮದ ಕುಬೇರಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಯಲ್ಲಿ ಆರೋಪಿ ಹನುಮಂತಪ್ಪ ಹಾಗೂ ಗಿರೀಶ್ ತಪ್ಪಿಸಿಕೊಂಡಿದ್ದಾರೆ.
ಕಾರ್ಯಾಚರಣೆಯನ್ನು ಸಾಗರ ಉಪಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ಮಾರ್ಗದರ್ಶನದಲ್ಲಿ ಶಿಕಾರಿಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ,ಅರಣ್ಯಾಧಿಕಾರಿ ರಾಘವೇಂದ್ರ, ಸಿಬ್ಬಂದಿ ಸವಿನಯ, ಅಮಿತ್, ಅಮರೇಶ್, ಸತೀಶ್, ಸುನೀಲ್, ಶಿವಕುಮಾರ್, ಸಂತೋಷ್ ಚಾಲಕ ರಿಯಾಝ್ ಅಹ್ಮದ್ ಪಾಲ್ಗೊಂಡಿದ್ದರು.







